ವರದಿ:ನಿಷ್ಕಲ ಎಸ್.ಗೌಡ, ಮೈಸೂರು
ಮೈಸೂರು: ಒಳಮೀಸಲಾತಿ ಸಮೀಕ್ಷೆ ಸಂಬಂಧ ನಾಗಮೋಹನದಾಸ್ ಏಕಸದಸ್ಯ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಪರಿಶಿಷ್ಟ ಜಾತಿ ಸಮೀಕ್ಷೆ ವರದಿ ಸಂಪೂರ್ಣ ಅವೈಜ್ಞಾನಿಕ ಎಂದು ಆರೋಪಿಸಿ ಸಂವಿಧಾನ ಸಂರಕ್ಷಣಾ ವೇದಿಕೆ ವತಿಯಿಂದ ವರದಿಯ ಪ್ರತಿಯನ್ನು ಸುಟ್ಟು ಪ್ರತಿಭಟನೆ ನಡೆಸಿದ ಘಟನೆ ಮೈಸೂರು ಪುರಭವನ ಎದುರು ನಡೆಯಿತು.
ಶನಿವಾರ ಪುರಭವನದ ಎದುರು ಅಂಬೇಡ್ಕರ್ ಪ್ರತಿಮೆ ಪಕ್ಕದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಒಳ ಮೀಸಲಾತಿ ಸಮೀಕ್ಷೆ ಸಂಬಂಧ ದತ್ತಾಂಶ ಕ್ರೂಢಿಕರಣಕ್ಕಾಗಿ ನಾಗಮೋಹನ್‍ದಾಸ್ ಆಯೋಗ ಸಂಗ್ರಹಿಸಿರುವ ವರದಿಯಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ ಬಲಗೈ ಸಮಾಜದ ಹೋರಾಟಗಾರರು ಪ್ರತಿಭಟನಾ ಸಭೆ ನಡೆಸಿದ ಬಳಿಕ ವರದಿಯ ಪ್ರತಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ನಾಗಮೋಹನ ದಾಸ್ ಆಯೋಗ ನೀಡಿರುವ ಒಳಮೀಸಲಾತಿ ವರದಿ ಸ್ಪಷ್ಟವಾಗಿ ಕೂಡಿರಬೇಕು. ಯಾರು ಇದನ್ನು ಬಿಡುಗಡೆಗೊಳಿಸಿದ್ದಾರೊ ಅವರು ಸುದ್ದಿಗೋಷ್ಠಿ ಮಾಡಿ ಅಂಕಿಅಂಶಗಳ ಜತೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 2025ರ ಸಮೀಕ್ಷೆ ಪ್ರಕಾರ ಪರಿಶಿಷ್ಟ ಜಾತಿ ಒಂದು ಕೋಟಿ ಇಪ್ಪತ್ತೈದು ಲಕ್ಷಕ್ಕಿಂತ ಅಧಿಕವಾಗಿದ್ದೇವೆ. ಆದರೆ ಇಂದಿನ ಸಮೀಕ್ಷೆಯಲ್ಲಿ ಒಂದು ಕೋಟಿ ಮುಟ್ಟಿಲ್ಲ. 90 ರಿಂದ 93 ಲಕ್ಷದವರೆಗೆ ಮಾತ್ರ ನಮೂದಾಗಿದೆ. ಇನ್ನೂ 30 ರಿಂದ 35 ಲಕ್ಷ ಯಾಕೆ ಸಮೀಕ್ಷೆಯಾಗಿಲ್ಲ ಎಂದು ಪ್ರಶ್ನಿಸಿದರು. ಎಡಗೈ ಹಾಗೂ ಬಲಗೈ ಎಂದು ವಿಂಗಡಿಸಿ ಬದುಕಬೇಕು ಎನ್ನುವುದು ಇಲ್ಲ. ಇದು ನಮ್ಮೊಳಗಿನ ಒಂದು ಕಿತ್ತಾಟದಲ್ಲಿ ಬೇರೆ ಸಮುದಾಯಗಳು ಪ್ರವೇಶ ಮಾಡಿ ಒಡೆದಾಳುವ ನೀತಿಯ ಸಮೀಕ್ಷೆಯನ್ನು ಕೊಡುವುದರ ಮೂಲಕ ಮೇಲ್ವರ್ಗದವರು ನಮ್ಮನ್ನು ಮತ್ತೆ ಗೊಂದಲಕ್ಕೆ ಸಿಕ್ಕಿಸುತ್ತಿದ್ದಾರೆ ಎಂದು ತಿಳಿಸಿದರು.
ಸಮೀಕ್ಷೆಯ ಪ್ರಕಾರ ನೋಡಿದರೆ 27 ಲಕ್ಷ ಎಡಗೈ ಹಾಗೂ 24 ಲಕ್ಷ ಬಲಗೈ ತೆಗೆದುಕೊಂಡಿದೆ. ಇದರ ವರದಿಯನ್ನು ಇನ್ನೂ ಕೂಡ ಕ್ಯಾಬಿನೆಟ್‍ನಲ್ಲಿ ಚರ್ಚೆಯಾಗಲು, ಸಾರ್ವಜನಿಕವಾಗಿ ಮುಕ್ತವಾಗಿ ಚರ್ಚೆಯಾಗಲು ಬಿಟ್ಟಿಲ್ಲ. ಈಗಾಗಲೇ ನಾಗಮೋಹನದಾಸ್ ವರದಿಯಲ್ಲಿ ಬಲಗೈಗೆ ಶೇ.5 ಹಾಗೂ ಎಡಗೈಗೆ ಶೆ.6 ರಷ್ಟು ಎಂಬುದನ್ನು ತೀರ್ಮಾನಿಸಿದ್ದಾರೆ ಎಂದರು.
ರಾಜ್ಯದ ಇತಿಹಾಸದಲ್ಲಿ ಬಲಗೈ ಸಮುದಾಯ ಎಲ್ಲರಿಗಿಂತ ಹೆಚ್ಚಿದೆ. 130 ರಿಂದ 150 ವರ್ಷದ ಇತಿಹಾಸ ನೋಡಿದರೆ ಬ್ರಿಟಿಷ್ ಸರ್ಕಾರ ಗೆಜೆಟ್‍ನಲ್ಲಿ 1881ರಲ್ಲಿ ಜನಸಂಖ್ಯೆ ಆಧಾರದ ಪ್ರಕಾರ ಅತಿ ಹೆಚ್ಚು ಸಂಖ್ಯೆಯಲ್ಲಿರುವವರೇ ಬಲಗೈ ಸಮುದಾಯದವರು. ಇಲ್ಲಿಯವರೆಗೂ ಆ ವರದಿಯನ್ನೇ ಆಧಾರವನ್ನಾಗಿಟ್ಟುಕೊಂಡೇ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಳೆದ 2 ರಿಂದ 3 ವರ್ಷಗಳ ಹಿಂದೆ ಬಲಗೈ ಸಮುದಾಯಕ್ಕೆ ಶೇ.5.5 ಹಾಗೂ ಎಡಗೈ ಸಮುದಾಯಕ್ಕೆ ಶೆ.5.5 ಮೀಸಲಾಯತಿಯ ಬಗ್ಗೆ ಚರ್ಚೆ ಮಾಡುತ್ತಿದ್ದೇವು. ಅದನ್ನು ಸರ್ಕಾರ ಸೇರಿದಂತೆ ಯಾರೂ ಸಹ ಒಪ್ಪಿಕೊಳ್ಳಲು ಸಿದ್ದರಾಗಿರಲಿಲ್ಲ. ಸದ್ಯ ನಾಗಮೋಹನದಾಸ್ ವರದಿಯೂ ಸಹ ಸ್ಪಷ್ಟವಾಗಿ ಬರಬೇಕು. ಆಗ ವರದಿಯ ಬಗ್ಗೆ ನಂಬಿಕೆ ಬರುತ್ತದೆ ಎಂದು ತಿಳಿಸಿದರು.
ದಿಕ್ಕುತಪ್ಪಿಸುವ ಹಾಗೂ ಎಡಗೈ ಹಾಗೂ ಬಲಗೈ ಸಮುದಾಯದ ಜತೆ ಒಡೆದಾಳುವ ನೀತಿಯನ್ನು ಏಕೆ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಹೀಗಾಗಿ ಇದನ್ನು ಇನ್ನು ಮುಂದೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮನ್ನ ಒಡೆದಾಳುವ ಮೂಲಕ ಸಾಮ್ರಾಜ್ಯವನ್ನು ಕಟ್ಟುತ್ತೀವಿ ಎನ್ನುವುದು ನಿಮ್ಮ ಮೂರ್ಖತನ. ನಮಗೆ ಕೊಡಬೇಕಾದ ಪಾಲಿನ ಬಗ್ಗೆ ಸರಿಯಾದ ರೀತಿಯಲ್ಲಿ ಸಮೀಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಎನ್. ಭಾಸ್ಕರ್ ಮಾತನಾಡಿ, ರಾಜ್ಯ ಸರ್ಕಾರ ಉಪಸಮಿತಿಯೊಂದನ್ನು ರಚಿಸಿ ವರದಿಯನ್ನು ಪುನರ್‍ಪರಿಶೀಲಿಸಬೇಕು. ಆದಿ ಕರ್ನಾಟಕ ಒಂದು ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಪರಾರ್ ಹಾಗೂ ಪರ್ಯಾತ್, ಛಲವಾದಿ ಎಲ್ಲವೂ ವಿಂಗಡಣೆಯಾಗಿದೆ. ಇವೆಲ್ಲವೂ ಸೇರಿದಂತೆ ಮಾದಿಗ ಸಮುದಾಯಕ್ಕಿಂತ ಹೆಚ್ಚು ಬರುತ್ತೇವೆ. ಹೀಗಾಗಿ ಇದು ಅವೈಜ್ಞಾನಿಕವಾಗಿ ಕೂಡಿದೆ ಎಂದರು.
ಪ್ರತಿಭಟನೆಯಲ್ಲಿ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಪರಿಶಿಷ್ಟ ಜಾತಿ ವಿಭಾಗದ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸಂತೋಷ್ ಕುಮಾರ, ಪೈ.ಕೃಷ್ಣಪ್ಪ, ಎಚ್.ಎಸ್.ಮುನಿರಾಜು, ಹರಿಹರ ಆನಂದಸ್ವಾಮಿ, ಚೆನ್ನಕೇಶವಮೂರ್ತಿ, ವಕೀಲರಾದ ತಿಮ್ಮಯ್ಯ, ಉಮೇಶ್, ಎ.ಆರ್., ಕಾಂತರಾಜು, ಪುಟ್ಟರಸ, ಗಂಗಾಧರ್, ಮಂಜುಳಾ, ಮೈತ್ರಿ, ಸಿ. ಹರಕುಮಾರ್, ಸಿದ್ದಸ್ವಾಮಿ, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಸಂಘದ ಡಿ ಚಂದ್ರಶೇಖರಯ್ಯ , ಹನಸೋಗೆ ನಾಗರಾಜ್, ಜಿ.ಮಹದೇವು, ವಿಷ್ಣುವರ್ಧನ್, ಎಚ್.ಪಿ. ಮಹೇಶ್ ಮುಂತಾದವರಿದ್ದರು.
ನಾಗಮೋಹನದಾಸ್ ಅವರಿಗೆ ಜಾತಿ ಸಮೀಕ್ಷೆ ಮಾಡಲು ಮಾತ್ರ ಸರ್ಕಾರ ನೇಮಕ ಮಾಡಿತ್ತು. ಆದರೆ ಅವರು ಜಾತಿ ಸಮೀಕ್ಷೆ ಜತೆಯಲ್ಲಿ ಜಾತಿಯನ್ನು ವಿಂಗಡಣೆ ಮಾಡಿದ್ದಾರೆ. ಇದಕ್ಕೆ ಯಾರು ಅವಕಾಶ ಮಾಡಿಕೊಟ್ಟರು. ಇದನ್ನು ಖಂಡಿಸಿ ಆ.14ರಂದು ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗುವುದು. ಕನಿಷ್ಠ 25 ಸಾವಿರ ಜನರು ಭಾಗವಹಿಸಲಿದ್ದಾರೆ.
- ಎನ್.ಭಾಸ್ಕರ್, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ
0 ಕಾಮೆಂಟ್‌ಗಳು