ಕರ್ನಾಟಕದಲ್ಲಿ ತಮಿಳು ಚಿತ್ರಗಳ ಬಿಡುಗಡೆ, ಚಿತ್ರೀಕರಣ ಯಾವುದಕ್ಕೂ ಅನುಮತಿ ನೀಡಬಾರದು : ಕೃಷ್ಣೇಗೌಡ


 ಮೈಸೂರು : ಕನ್ನಡ ಭಾಷೆಯ ಗಂಧ, ಗಾಳಿ, ಸಂಸ್ಕೃತಿ, ಇತಿಹಾಸ, ಪರಂಪರೆ ಯಾವುದೂ ಗೊತ್ತಿಲ್ಲದ ನಟ ಕಮಲಹಾಸನ್ ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿದ್ದು, ಅಕ್ಷಮ್ಯ ಅಪರಾಧ ಸರ್ಕಾರ ಕನ್ನಡ ನಾಡಿನ ನೆಲದಲ್ಲಿ ತಮಿಳು ಚಿತ್ರಗಳ ಚಿತ್ರೀಕರಣ ಮತ್ತು ರಾಜ್ಯದ ಯಾವುದೇ ಚಿತ್ರಮಂದಿರಗಳಲ್ಲಿ ತಮಿಳು ಚಿತ್ರಗಳ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕರ್ನಾಟಕ ರಾಜ್ಯ ರೈತಸಂಘದ(ರೈತಬಣ)ಅಧ್ಯಕ್ಷ ಇ.ಎನ್.ಕೃಷ್ಣೇಗೌಡ ಒತ್ತಾಯಿಸಿದರು.

ಗುರುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಯು ತಮಿಳು ಭಾಷೆಯಿಂದ ಹುಟ್ಟಿದೆ ಎಂದು ಹೇಳಲು ಯಾವ ಆಧಾರವಿದೆ.

ಕನ್ನಡದ ಅನ್ನ ತಿಂದು ಬೆಳೆದ ನಟನೊಬ್ಬ ಕೇವಲ ತಮಿಳಿಗರನ್ನು ಮೆಚ್ಚಿಸಲು ಕನ್ನಡಕ್ಕೆ ಅವಮಾನ ಮಾಡುವುದು ಸರಿಯಲ್ಲ. ಇದು ಉಂಡ ಮನೆಗೆ ಕನ್ನ ಹಾಕಿದಂತೆ. ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಕಮಲ್ ಹಾಸನ್ ಒಬ್ಬ ಸಧಬಿರುಚಿಯ ನಟ ಎಂದು ಇದುವರೆಗೂ ನಾವು ತಿಳಿದುಕೊಂಡಿದ್ದೆವು. ಆದರೇ, ಅವರಲ್ಲೊಬ್ಬ ಕನ್ನಡ ದ್ರೋಹಿ ಅಡಗಿದ್ದಾನೆಂದು ಈಗ ಗೊತ್ತಾಗಿದೆ. ನಾವು ಈತನ ಕ್ಷಮೆ ಕೇಳುವುದಿಲ್ಲ, ಆದರೇ, ಈತನ ಯಾವುದೇ ಚಿತ್ರಗಳನ್ನು ಕನ್ನಡ ನಾಡಿನ ಯಾವುದೇ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಸರ್ಕಾರ ಅವಕಾಶ ನೀಡಬಾರದು.  ಒಂದು ವೇಳೆ ಪ್ರದರ್ಶನ ಮಾಡಿದರೆ ಮುಂದಾಗುವ ಪರಿಣಾಮಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು. 

ರಾಜ್ಯದಲ್ಲಿ ಕಮಲ್ ಹಾಸನ್ ಒಬ್ಬರ ಚಿತ್ರವನ್ನಷ್ಟೇ ಅಲ್ಲದೇ ಬೇರೆ ಯಾವ ತಮಿಳು ಚಿತ್ರಗಳೂ ಸಹ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಮತ್ತು ನಮ್ಮ ನಾಡಿನಲ್ಲಿ ತಮಿಳು ಚಿತ್ರಗಳ ಚಿತ್ರೀಕರಣವನ್ನೂ ಮಾಡಬಾರದು. ಮುಂದೆ ಯಾವ ನಟರಾಗಲೀ, ರಾಜಕಾರಣಿಗಳಾಗಲಿ ಅಥವಾ ಯಾರೇ ಆದರೂ ಕನ್ನಡ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಕನ್ನಡಿಗರು ಸಹಿಸುವುದಿಲ್ಲ. ಕಮಲಹಾಸನ್ ಅವರಿಗೆ ಇದೊಂದು ಪಾಠವಾಗಬೇಕು ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು