ಮಡಿವಾಳ ಸಮುದಾಯಕ್ಕೂ ಒಳಮೀಸಲಾತಿ ಕಲ್ಪಿಸಿ : ಮಡಿವಾಳ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಸತ್ಯನಾರಾಯಣ, ಗೌರವಾಧ್ಯಕ್ಷ ಬಿ.ಜಿ.ಕೇಶವ ಆಗ್ರಹ


 ಮೈಸೂರು : ಕರ್ನಾಟಕ ರಾಜ್ಯದಲ್ಲಿ ಮಡಿವಾಳ ಸಮುದಾಯದವು 2ಎ ಮೀಸಲಾತಿಗೆ ಒಳಪಟ್ಟಿದ್ದು, ಇದರಲ್ಲಿ ಪ್ರಬಲವಾಗಿರುವ ಕುರುಬ ಮತ್ತು ಈಡಿಗ ಸಮುದಾಯದೊಂದಿಗೆ ಸೆಣೆಸಾಡಿ ರಾಜಕೀಯ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಾನಮಾನ ಪಡೆಯಲು ಕಷ್ಟವಾಗಿರುವ ಕಾರಣ ಪ್ರವರ್ಗ 2ಎ ರಲ್ಲಿಯೇ ಮಡಿವಾಳರಿಗೆ ಒಳ ಮೀಸಲಾತಿ ಕಲ್ಪಿಸಬೇಕೆಂದು ಮೈಸೂರು ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಸತ್ಯನಾರಾಯಣ ಮತ್ತು ಗೌರವಾಧ್ಯಕ್ಷರಾದ ಬಿ.ಜಿ.ಕೇಶವ ಒತ್ತಾಯಿಸಿದ್ದಾರೆ.

ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ರಾಜ್ಯದಲ್ಲಿ ಮಡಿವಾಳ ಸಮುದಾಯ 6 ಲಕ್ಷ ಇದೆ ಎಂದು ಕಾಂತರಾಜು ಆಯೋಗದ ವರದಿಯಲ್ಲಿ ನಮೂದಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿದ್ದು ಅದು ತಪ್ಪು, ವಾಸ್ತವದಲ್ಲಿ ಮಡಿವಾಳರು 12ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಸ್ವಾತಂತ್ರ್ಯ ಬಂದು 78 ವರ್ಷವಾದರೂ ನಮ್ಮ ಸಮುದಾಯದ ಯಾವೊಬ್ಬರೂ ಇದುವರೆಗೂ ರಾಜ್ಯದಲ್ಲಿ ಶಾಸಕರಾಗಲೀ, ಸಂಸದರಾಗಲೀ ಆಗಿಲ್ಲ. ಯಾವುದೇ ಪ್ರಬಲ ರಾಜಕೀಯ ಸ್ಥಾನಮಾನ ಈ ಸಮುದಾಯಕ್ಕೆ ಸಿಕ್ಕಿಲ್ಲ. ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಈ ಸಮುದಾಯ ಇನ್ನೂ ತಳಮಟ್ಟದಲ್ಲೇ ಇದೆ. 

ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಸಹಾ ಈ ಸಮುದಾಯದ ಯುವಕರು ಬಟ್ಟೆ ಒಗೆದು ಜೀವನ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಂತೂ ಈ ಸಮುದಾಯಕ್ಕೆ ಇಂದಿಗೂ ಯಾವುದೇ ಮಾನ್ಯತೆ ಸಿಕ್ಕಿಲ್ಲ,

ಎಲ್ಲರ ಬಟ್ಟೆಗಳನ್ನು ಮಡಿ ಮಾಡುವ ಮಡಿವಾಳರ ಬದುಕು ಮಾತ್ರ ಇನ್ನು ಶುಚಿಯಾಗಲಿಲ್ಲ ಎನ್ನುವುದು ಬೇಸರದ ಸಂಗತಿ,  ಒಂದು ಕಡೆ ಮಲ ಹೊರುವವನು ಪರಿಶಿಷ್ಟನಾದರೆ ಮಲ ಮಿಶ್ರಿತ,

ರೋಗ ರುಜಿನಗಳ ಬಟ್ಟೆಯನ್ನು ಶಧುಚಿಮಾಡುವ ಮಡಿವಾಳ ಮಾತ್ರ ಪರಿಶಿಷ್ಟನಾಗಲಿಲ್ಲ? ಇದಕ್ಕೆ ಕಾರಣ ಏನು ಎನ್ನುವುದು ಇಂದಿಗೂ ಯಕ್ಷಪ್ರಶ್ನೆಯಾಗಿದೆ. ಹೀಗಾಗಿ ಸಾಮಾಜಿಕ ನ್ಯಾಯದ ಹರಿಕಾರರು ಎಂದೇ ರಾಜ್ಯದಲ್ಲಿ ಪ್ರಸಿದ್ಧಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲೇ ಪ್ರವರ್ಗ 2ಎ ಮೀಸಲಾತಿ ಒಳಗೆ ಮಡಿವಾಳ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಿದ್ದಲ್ಲಿ ಈ ಸಮುದಾಯ ಮುಂದೊಂದು ದಿನ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬರಲು ಸಾಧ್ಯವಿದೆ ಎಂದು ಸತ್ಯನಾರಾಯಣ ಮತ್ತು ಕೇಶವ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

12ನೇ ಶತಮಾನದಲ್ಲಿ ಒಂದಷ್ಟು ಉತ್ತಮ ಸ್ಥಾನಮಾನ ಹೊಂದಿದ್ದ ಈ ಸಮುದಾಯವನ್ನು ಇತ್ತೀಚೆಗೆ ನಿಕೃಷ್ಟವಾಗಿ ಕಾಣಲಾಗುತ್ತಿದೆ. ಈ ಕಾರಣದಿಂದ ಕಳೆದ 40 ವರ್ಷಗಳಿಂದಲೂ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಬೇಡಿಕೆಯೂ ಇದೆ. ಈ ಬಗ್ಗೆ ಅನ್ನಪೂರ್ಣಮ್ಮ ಆಯೋಗದ ವರದಿಯೂ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಶಿಫಾರಸ್ಸು ಮಾಡಿದೆ. ಮಡಿವಾಳ ಸಮುದಾಯದ ಪರಿಸ್ಥಿತಿ ಹೀಗಿದ್ದರೂ ರಾಜ್ಯವನ್ನಾಳುವ ದೊರೆಗಳು ಈ ಸಮುದಾಯದ ಹಿತಕ್ಕಾಗಿ ಯಾವುದೇ ಕ್ರಮ ಕೈಗೊಂಡಿಲ್ಲ.

ಶತ ಶತಮಾನದಿಂದಲೂ ತುಳಿತಕ್ಕೆ ಒಳಗಾದ ತಳ ಸಮುದಾಯವಾದ ಮಡಿವಾಳರಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಕ್ತ ಕಾಲಾವಕಾಶ ಒದಗಿದೆ. ಈ ವಿಷಯ ಕುರಿತು ಮೈಸೂರು ಜಿಲ್ಲಾ ಮಡಿವಾಳ ಸಮುದಾಯದ ನಿಯೋಗವು ತಾಲ್ಲೂಕಿನ ಎಲ್ಲ ಮಡಿವಾಳ ಮುಖಂಡರ ಜತೆಗೂಡಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ. ಜತೆಗೆ ಉಚ್ಛ ನ್ಯಾಯಾಲಯದಲ್ಲಿ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಮಡಿವಾಳ ಸಮುದಾಯಕ್ಕೆ ನ್ಯಾಯ ಕೋರಿ ಪಿಐಎಲ್ ಸಲ್ಲಿಸಲಿದೆ ಎಂದು ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು