ಮೈಸೂರು : ದೇಶದ ಬೆಳಕು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಕೂಡಲೇ ದೇಶದ ಜನತೆಯ ಕ್ಷಮೆ ಯಾಚಿಸಬೇಕು. ಇಲ್ಲವೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಎಸ್‌ಡಿಪಿಐ ವತಿಯಿಂದ ಸೋಮವಾರ ರಾತ್ರಿ ಪ್ರತಿಭಟನೆ ನಡೆಯಿತು.
ನಗರದ ಕುರಿಮಂಡಿ ಸರ್ಕಲ್ ಬಳಿಯ ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ನೂರಾರು ಪ್ರತಿಭಟನಾಕಾರರು ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ ಮಾತನಾಡಿ, ಭಾರತೀಯ ಜನತಾ ಪಕ್ಷ ಮೂಲತಃ ಸಂವಿಧಾನ ವಿರೋಧಿ ಪಕ್ಷವಾಗಿದೆ. ಸಂವಿಧಾನದ ಅಡಿಯಲ್ಲಿ ಆಯ್ಕೆಯಾದ ಅಮಿತ್ ಶಾ ದೇಶದ ಶಕ್ತಿಸೌಧ ಪಾರ್ಲಿಮೆಂಟ್‌ನಲ್ಲಿ ಸಂವಿಧಾನ ಶಿಲ್ಪಿಯನ್ನೇ ಅವಮಾನ ಮಾಡಿದ್ದಾರೆ.
ಇದು ಕೇಂದ್ರ ಸರ್ಕಾರಕ್ಕೆ ಮಾಡಿದ ಅಪಮಾನ, ದೇಶದ ನಿಮ್ಮನ್ನು ಪ್ರಶ್ನೆ ಮಾಡುತ್ತಿದೆ. ಪ್ರಧಾನಿಗಳು ಶಾ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ದೇಶದ ಗೃಹಮಂತ್ರಿ ಸ್ಥಾನಕ್ಕೆ ಅಪಾರ ಗೌರವವಿದೆ. ಅಂತಹ ಸ್ಥಾನಕ್ಕೆ ಧಕ್ಕೆ ತಂದವರನ್ನು ಇನ್ನೂ ಸಂಪುಟದಲ್ಲಿ ಇರಿಸಿಕೊಂಡಿರುವುದು ನಾಚಿಕೆಗೇಡು.
ಬಿಜೆಪಿ ಕೇವಲ ಓಟಿನ ರಾಜಕಾರಣಕ್ಕಾಗಿ ಅಂಬೇಡ್ಕರ್ ಅವರ ಸ್ಮರಣೆ ಮಾಡುತ್ತದೆ. ಆದರೇ, ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುವ ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಜನರು ಧಿಕ್ಕರಿಸಬೇಕು. ಇದು ಜನಪರ ಸರ್ಕಾರವಲ್ಲ, ಜನ ವಿರೋಧಿ ಸರ್ಕಾರ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ನಮ್ಮ ಸೇವಕರು. ನಾವೇ ಪ್ರಭುಗಳು. ನಮ್ಮ ಸೇವೆ ಮಾಡಲಿಲ್ಲವೆಂದರೆ ಅವರನ್ನು ಕೆಳಗಿಳಿಸಲು ಏನು ಬೇಕೋ ಅದನ್ನು ನಾವು ಮಾಡುತ್ತೇವೆ. ಅಮಿತ್ ಶಾ ದೇಶದ ಕ್ಷಮೆ ಕೇಳುವ ತನಕ ಈ ಚಳವಳಿ ನಿಲ್ಲಬಾರದು. ಅಲ್ಲಿಯ ತನಕ ಹೋರಾಟಗಳನ್ನು ಜೀವಂತವಾಗಿಡಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ವ್ಯವಸ್ಥೆಯನ್ನು ಬದಲಾಯಿಸುತ್ತೇವೆ ಎಂದು ಶಿವಣ್ಣ ಎಚ್ಚರಿಕೆ ನೀಡಿದರು.
ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಎಸ್.ಸ್ವಾಮಿ ಮಾತನಾಡಿ, ಬಿಜೆಪಿ ದೇಶದಲ್ಲಿ ದಲಿತ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದೆ. ಹೀಗಾಗಿ ಈ ದೇಶದ ನಕ್ಷತ್ರವಾದ ಅಂಬೇಡ್ಕರ್ ಅವರನ್ನು ಹಿಯಾಳಿಸಿ ಈ ದೇಶಕ್ಕೆ, ನಮ್ಮ ಸಂವಿಧಾನಕ್ಕೆ ಅಪಮಾನ ಮಾಡಿದೆ. ಬೇರೆ ಯಾರದರೂ ಸಾಮಾನ್ಯ ಜನರು ಈ ಮಾತನ್ನು ಆಡಿದ್ದರೆ ಪೊಲೀಸರು ಅವರ ಮೇಲೆ ಸುಮೋಟೋ ಕೇಸು ದಾಖಲಿಸುತ್ತಿದ್ದರು. ಆದರೇ, ಅಮಿತ್ ಶಾ ವಿರುದ್ಧ ಇನ್ನೂ ಯಾಕೆ ಕೇಸು ದಾಖಲಿಸಿಲ್ಲೆಂದು ಕಿಡಿ ಕಾರಿದರು.
ಸುಲ್ತಾನ್ ಟಿಪ್ಪು ಬ್ಲಾಕ್ ಅಧ್ಯಕ್ಷ ಮತೀನ್ ಬೇಗ್ ಮಾತನಾಡಿ, ಅಂಬೇಡ್ಕರ್ ವಿರುದ್ಧ ಅಮಿತ್ ಶಾ ಬಾಯಿ ತಪ್ಪಿ ಮಾತನಾಡಿಲ್ಲ. ಇದನ್ನು ಬೇಕಂತಲೇ ಮಾತನಾಡಿದ್ದಾರೆ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಯ ವ್ಯವಸ್ಥಿತ ತಂತ್ರವಾಗಿದೆ. ದೇಶದ ಜನತೆಯ ದಿಕ್ಕು ತಪ್ಪಿಸಲು ಬಿಜೆಪಿ ಆಗಾಗ್ಗೆ ಇಂತಹದನ್ನು ಮಾಡುತ್ತದೆ. ಕೂಡಲೇ ಅಮಿತ್ ಶಾ ಅವರು ದೇಶದ ಜನತೆಯ ಕ್ಷಮೆ ಕೋರಬೇಕು ಇಲ್ಲವೇ ಪ್ರಧಾನಿ ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕುರಿಮಂಡಿ ಬಸವಣ್ಣ, ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಸಫಿಯುಲ್ಲಾ, ಮುಖಂಡರಾದ ಜ್ಞಾನಪ್ರಕಾಶ್ ಮುಂತಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಇಬ್ರಾಹಿಂ ಪಠನ್, ಮನ್ಸೂರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜವಾದ್, ವಾರ್ಡ್ ನಂ ೯ರ ಅಧ್ಯಕ್ಷ ಮೊಹಮ್ಮದ್ ಸಿದ್ದೀಕ್, ಜಬೀನಾ ಬೇಗಂ ಇನ್ನಿತರರು ಹಾಜರಿದ್ದರು.
0 ಕಾಮೆಂಟ್‌ಗಳು