ಶಾಸಕ ಜಿ.ಟಿ.ದೇವೇಗೌಡರ ಹೇಳಿಕೆ ಸುಳ್ಳು : ಕರ್ನಾಟಕ ಕನ್ನಡ ವೇದಿಕೆ ಅಧ್ಯಕ್ಷ ಸುರೇಶ್ ಬಾಬು ಆರೋಪ


 ಮೈಸೂರು : ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ ಅವರ ಹೇಳಿಕೆ ಕುರಿತು ‘ಜೈಲಿಗೆ ಹೋಗುವಂತಹ ತಪ್ಪು ನಾನಾಗಲೀ ಅಥವಾ ನನ್ನ ಮಗನಾಗಲಿ ಮಾಡಿಲ್ಲ’ ಎಂದು ಹೇಳಿರುವ ಶಾಸಕ ಜಿ.ಟಿ.ದೇವೇಗೌಡರ ಹೇಳಿಕೆಯೇ ಸುಳ್ಳು, ಅವರ ಮಾತು ಸತ್ಯವೇ ಆಗಿದ್ದರೇ, ಅವರ ಮಗ ಶಾಸಕ ಹರೀಶ್ ಗೌಡ ವಿರುದ್ಧ ದಾಖಲಾಗಿರುವ ಎಫ್‍ಐಆರ್ ಸುಳ್ಳೇ ಎಂದು ಕರ್ನಾಟಕ ಕನ್ನಡ ವೇದಿಕೆ ಅಧ್ಯಕ್ಷ ಸುರೇಶ್ ಬಾಬು ಸವಾಲು ಹಾಕಿದರು. 

ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿ.ಟಿ.ದೇವವೇಗೌಡರ ಮಗ ಜಿ.ಡಿ.ಹರೀಶ್‍ಗೌಡರು 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಾಗ ಸಲ್ಲಿಸಿರುವ ಪ್ರಮಾಣ ಪತ್ರದಂತೆ ಎಸಿಬಿ ಠಾಣೆಯಲ್ಲಿ ಸಂಖ್ಯೆ 10/2017 ರಂತೆ ಮೈಸೂರಿನ 3ನೇ ಹೆಚ್ಚುವರು ಜಿಲ್ಲಾ ಸೆಷನ್ ಮತ್ತು ವಿಶೇಷ ನ್ಯಾಯಾಲಯದಲ್ಲಿ ಭಾರತ ದಂಡ ಸಂಹಿತೆ ಕಲಂ 420, 120 (ಬಿ), ಸಹವಾಚ 34 ಮತ್ತು ಭ್ರಷ್ಟಾಚಾರ ಪ್ರತಿಬಂಧ ಕಾಯಿದೆ 1988 ರ ಕಲಂ 8, 13 (1) (ಸಿ) ಸಹವಾಚ 13 (2) ರಂತೆ ಕರ್ನಾಟಕ ಗೃಹ ಮಂಡಳಿಯಲ್ಲಿ ಅಕ್ರಮ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜಿ.ಟಿ.ದೇವೇಗೌಡರು ನಮ್ಮ ಸುದೀರ್ಘ ರಾಜಕೀಯ ಜೀವನ ಬಿಳೆ ಹಾಳೆ ಇದ್ದಂತೆ ಎಂದು ಹೇಳಿಕೊಳ್ಳುವುದು ಸರಿಯಾ? ಎಂದು ಪ್ರಶ್ನಿಸಿದರು.

ಕರ್ನಾಟಕ ಕನ್ನಡ ವೇದಿಕೆಯ ಅಧ್ಯಕ್ಷನಾದ ನಾನು ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಸಮಾಜದ ಬಗ್ಗೆ ಕಳಕಳಿ ಇಟ್ಟುಕೊಂಡು ಹೇಳುವುದೇನೆಂದರೆ, ರಾಜ್ಯದಲ್ಲಿ ಅಥವಾ ತಮ್ಮ ಕ್ಷೇತ್ರಗಳಲ್ಲಿ ಜನ ಸಾಮಾನ್ಯರ ಆರ್ಥಿಕ, ಸಾಮಾಜಿಕ, ರಾಜಕೀಯ ಬದಲಾವಣೆ ತರಬೇಕಾದ ತಾವುಗಳೇ ಹೀಗೆ ಸುಳ್ಳು ಸುಳ್ಳು ಹೇಳಿಕೊಂಡು ಸರ್ಕಾರದ ಹಣ ಲೂಟಿ ಮಾಡುತ್ತಿರುವುದು ಸರಿಯಲ್ಲ. ಇನ್ನು ಮುಂದಾದರೂ ಮಾಧ್ಯಮದವರ ಮುಂದೆ ಬಾಯಿ ಚಪಲಕ್ಕೆ ಏನೇನೋ ಮಾತನಾಡಿ, ತಮ್ಮ ಕಾಲ ಮೇಲೆ

ತಾವೇ ಕಲ್ಲು ಹಾಕಿಕೊಳ್ಳುವ ಕಾರ್ಯವನ್ನು ಮಾಡಬೇಡಿ ಇಲ್ಲದಿದ್ದಲ್ಲಿ ತಾವು ಮಾಡಿರುವ ಅನಾಚಾರ, ಅಕ್ರಮಗಳು ಮುಂದೆ ಜನರ ಗಮನಕ್ಕೆ ಬರಲಿವೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆ ಪದಾಧಿಕಾರಿಗಳಾದ ಕಾರ್ತಿಕ್, ಕುಮಾರ್, ಪುನೀತ್ ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು