ಮಹಾರಾಣಾ ಪ್ರತಾಪ್ ರಾಜಪುತ್ ಮಹಿಳಾ ಸಮಾಜದ ವತಿಯಿಂದ ರಾಜಪುತ್ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಿವೃತ್ತ ಸೈನಿಕರಿಗೆ ಸನ್ಮಾನ

ಮೈಸೂರು : ನಗರದ ಮಹಾರಾಣಾ ಪ್ರತಾಪ್ ರಾಜಪುತ್ ಮಹಿಳಾ ಸಮಾಜದ ವತಿಯಿಂದ ಶಿವಾಜಿ ರಸ್ತೆಯಲ್ಲಿರುವ ಸಮುದಾಯ ಭವನದಲ್ಲಿ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಎಲ್.ನಾಗೇಂದ್ರ ಅವರು ಮಹಾರಾಣಾ ಪ್ರತಾಪ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ರಾಜಪೂತ್ ಸಮುದಾಯ ಶೌರ್ಯ ಮತ್ತು ಸಾಹಸಕ್ಕೆ ಹೆಸರಾಗಿದೆ. ಈ ಸಮುದಾಯದ ಮಕ್ಕಳು ಅತ್ಯಂತ ಪ್ರತಿಭಾವಂತರಾಗಿದ್ದಾರೆ. ಜತೆಗೆ ಇದೇ ಸಮುದಾಯದ ಹಲವಾರು ಜನರು ಸೈನ್ಯದಲ್ಲಿ ಸೇವೆ ಸಲ್ಲಿಸಿ ದೇಶಸೇವೆ ಮಾಡಿದ್ದಾರೆ. ಇಂತಹವರನ್ನು ಮಹಿಳಾ ಮುಖಂಡರಾದ ಕವಿತಾ ಸಿಂಗ್ ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ಕವಿತಾ ಸಿಂಗ್ ಒಬ್ಬ ಕ್ರಿಯಾಶೀಲ ನಾಯಕಿಯಾಗಿದ್ದಾರೆ. ಸಮುದಾಯದವರನ್ನು ಸಂಘಟಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುತ್ತಿದ್ದಾರೆ. ಪ್ರತಿಭಾವಂತ ಮಕ್ಕಳು ಮತ್ತು ನಿವೃತ್ತ ಸೈನಿಕರಿಗೆ ಗೌರವಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದರು.

ಕವಿತಾ ಸಿಂಗ್ ಮಾತನಾಡಿ, ಮೈಸೂರಿನಲ್ಲಿ ರಾಜಪುತ್ ಸಮುದಾಯ ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದರೂ ಪ್ರತಿಭಾವಂತರಿದ್ದಾರೆ. ಅವರನ್ನು ಯಾರೂ ಗುರುತಿಸುವ ಕೆಲಸ ಮಾಡಿಲ್ಲ. ಹೀಗಾಗಿ ನಮ್ಮ ಸಮುದಾಯದ ಪ್ರತಿಭೆಗಳನ್ನು ಸಮಾಜದ ಮುಂದೆ ಇಡುವುದು ನನ್ನ ಕರ್ತವ್ಯವಾಗಿದೆ. ಜತೆಗೆ ನಮ್ಮದೇ ಸಮುದಾಯದ ಹಲವಾರು ಜನರು ಸೈನ್ಯದಲ್ಲಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇಂತಹವರನ್ನು ಇಂದು ಗುರುತಿಸಿ ಗೌರವಿಸುತ್ತಿರುವುದು ನನಗೆ ಹೆಮ್ಮೆ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನವನ್ನು ಮಾಜಿ ಶಾಸಕ ಎಲ್.ನಾಗೇಂದ್ರ ಮತ್ತು ಮಾಜಿ ಮೇಯರ್ ಸಂದೇಶ್ ಸ್ವಾಮಿ ನಡೆಸಿಕೊಟ್ಟರು.

ಈ ವೇಳೆ ಮುಖಂಡರಾದ ಸು.ಮುರಳಿ, ದಿವಾಕರ್, ನಂದಾಸಿಂಗ್, ಲೀನಾಸಿಂಗ್, ಶೀತಲ್ ಸಿಂಗ್, ಅನಿತಾಸಿಂಗ್, ಗಣೇಶ್ ಸಿಂಗ್, ಗೋವಿಂದ್ ಸಿಂಗ್, ಬದ್ರಿನಾರಾಯಣಸಿಂಗ್, ಮೋಹನ್ ಸಿಂಗ್, ವಿನೋದ್ ಸಿಂಗ್ ಮತ್ತಿತರರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು