ವಿಶ್ವನಾಥ್ ಒಬ್ಬ ಹುಚ್ಚ, ಚಿಕಿತ್ಸೆ ಪಡೆಯಲಿ : ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ತಿರುಗೇಟು
ಜುಲೈ 13, 2024
ಮೈಸೂರು: ಗುಜರಿ ಲಾರಿ, ಬಸ್‌ಗಳು ಮಾರಾಟವಾದಂತೆ ಎಲ್ಲ ಪಕ್ಷಗಳಿಗೂ ಹೋಗಿ ಬಂದಿರುವ ವಿಶ್ವನಾಥ್ ಜವಾಬ್ದಾರಿಯಿಂದ ಮಾತನಾಡಬೇಕು. ಯಾವುದೇ ದಾಖಲೆ ಇಲ್ಲದೆ, ಸುಖಾ ಸುಮ್ಮನೆ ಮಾತನಾಡುವುದು ಸರಿಯಲ್ಲ. ವಿಶ್ವನಾಥ್ ಒಬ್ಬ ಹುಚ್ಚ, ಚಿಕಿತ್ಸೆ ಪಡೆಯುವುದು ಉತ್ತಮ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಕಿಡಿ ಕಾರಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ೩೦ ವರ್ಷದ ಹಿಂದೆ ಈ ಬಡಾವಣೆ ಅಭಿವೃದ್ಧಿ ಮಾಡಿದ್ದು, ಪಾರ್ಕ್ ಹಾಗೆಯೇ ಇದೆ. ಸಿಎ ನಿವೇಶನದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್ ನಿರ್ಮಿಸುತ್ತಿದೆ. ಮಂಜೇಗೌಡ ಮೂಡಾ ಅಟೆಂಡರ್ ಆಗಿದ್ದಾರೆ, ಪಾರ್ಕ್ ಜಾಗವನ್ನು ನಿವೇಶನಗಳನ್ನಾಗಿ ಅಕ್ರಮವಾಗಿ ಮಾರಿದ್ದಾರೆ ಎನ್ನುವುದು ಸುಳ್ಳು, ಅವರು ೧೦೦ ಬಾರಿ ಬೈಯೋದು ಸರಿ, ನಾವು ಒಂದು ಬಾರಿ ಅವರನ್ನು ಬೈದರೆ ಆಗುವ ಪರಿಣಾಮ ಎಂತಹದು ಎಂಬುದನ್ನು ಗಂಭೀರವಾಗಿ ಪರಿಗಣಿಸಿ, ದಾಖಲೆ ಇದ್ದರೆ ಇಲ್ಲೇ ಬನ್ನಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರಲ್ಲದೇ, ಪಾರ್ಕ್ ಮತ್ತು ಹಾಸ್ಟೇಲ್ ನಿರ್ಮಾಣವಾಗುತ್ತಿರುವ ಭಾವಚಿತ್ರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು. ‘ನಾವು ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿನ ಸಿಎ ನಿವೇಶನದಲ್ಲಿ ಹಾಸ್ಟೆಲ್ ನಿರ್ಮಾಣವಾಗಿದೆ. ಪಾರ್ಕ್ ಜಾಗಕ್ಕೆ ಮುಡಾ ಬೇಲಿ ಹಾಕಿದೆ. ಅದನ್ನು ೨೦ ವರ್ಷಗಳ ಹಿಂದೆಯೇ ಮುಡಾಕ್ಕೆ ಹಸ್ತಾಂತರಿಸಲಾಗಿದೆ’ ಎಂದರು. ಇವರು ಪ್ರಧಾನಿ ಮೋದಿ, ದೇವೇಗೌಡ್ರು, ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಣ್ಣ, ಜೋ ಬಿಡೆನ್ ಯಾರನ್ನೂ ಬಿಟ್ಟಿಲ್ಲ, ಎಲ್ಲರ ವಿರುದ್ಧವೂ ಮಾತಾಡ್ತಾರೆ, ಏನು ಇವರೊಬ್ಬರೇ ಸತ್ಯಹರಿಶ್ಚಂದ್ರರು ಅಂದು ಕೊಂಡಿದ್ದಾರೆ. ಮಿಸ್ಟರ್ ವಿಶ್ವನಾಥ್ ಜವಾಬ್ದಾರಿಯಿಂದ ಮಾತನಾಡಿ, ನಮಗೂ ಮನೆ, ಮಠ, ಸಂಸಾರ, ಬಂಧು ಬಳಗ ಇದೆ. ನಮ್ಮ ಬಗ್ಗೆ ಸುಳ್ಳು ಆರೋಪ ಮಾಡಿದರೆ ಹೇಗೆ? ಜನ ಏನೆಂದುಕೊಳ್ತಾರೆ, ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಗುಡುಗಿದರಲ್ಲದೇ, ‘ನಾನು ಮುಡಾದಿಂದ ೧೦೪ ನಿವೇಶನ ಪಡೆದಿರುವುದಾಗಿ ಆರೋಪಿಸಿದ್ದಾರೆ. ನಾನು ೧೦೪ ಇಂಚು ಜಾಗ ಪಡೆದಿದ್ದರೂ ತೋರಿಸಲಿ’ ಎಂದು ಸವಾಲು ಹಾಕಿದರು. ಆನೆ ಬಿಟ್ಟು, ಬಾಲ ಹಿಡ್ಕೊಂಡಿದ್ದಾರೆ ದಟ್ಟಗಳ್ಳಿಯ ಸರ್ವೆ ನಂಬರ್ ೧೫/೧,೨, ೧೮/೪, ೧೯/೧,೨, ೨೦/೧,೨,೩,೪, ೨೭/೧,೨,೩,೪, ೩೨, ೩೮/೧,೨, ೪೦/೧,೨,೩, ೪೧/೨ ರಲ್ಲಿ ೨೭ ಎಕರೆ ಜಮೀನಿನಲ್ಲಿರುವ ನಿವೇಶನಗಳನ್ನು ಯಾರಿಗೂ ಕೊಡಬಾರದೆಂದು ವೀರಕುಮಾರ್ ಜೈನ್ ಎಂಬವರ ಹೆಸರಿನಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ. ಕೋರ್ಟ್ ಆದೇಶವಿದ್ದರೂ ಮೂಡಾ ಅಧಿಕಾರಿಗಳು ಏಕ ಪಕ್ಷೀಯವಾಗಿ ತೀರ್ಮಾನ ಮಾಡಿ ಅಕ್ರಮವಾಗಿ ಸರ್ವೋದಯ ಸಂಘಕ್ಕೆ ಟೈಟಲ್ ಡೀಡ್ ಸಮೇತ ಕೊಟ್ಟಿದ್ದಾರೆ. ಇದನ್ನು ಮೊದಲು ತನಿಖೆ ಮಾಡಿಸಿ ಎಂದು ದಾಖಲೆಗಳನ್ನು ಪ್ರದರ್ಶಿಸಿದರಲ್ಲದೇ, ಅಕ್ರಮದ ಆನೆಯನ್ನು ಬಿಟ್ಟು ಬಾಲವನ್ನು ಹಿಡಿದು ಅಲ್ಲಾಡಿಸುತ್ತಿದ್ದಾರೆ ಎಂದು ವಿಶ್ವನಾಥ್ ಆರೋಪಗಳಿಗೆ ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ದಿವಾಕರ್, ದಿನೇಶ್‌ಕುಮಾರ್, ಜಗದೀಶ್, ಹರ್ಷಕುಮಾರ್ ಇದ್ದರು. ಸಿಎಂ ಪತ್ನಿಗೆ ೫೦:೫೦ ಅನುಪಾತದಲ್ಲಿ ನೀಡಿದ್ದು ಸರಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ೫೦:೫೦ ಅನುಪಾತದಲ್ಲಿ ನಿವೇಶನ ನೀಡಿದ್ದು ಸರಿ ಇದೆ. ಆದರೇ, ಅವರು ಭೂಮಿ ಕಳೆದುಕೊಂಡ ಜಾಗದಲ್ಲಿಯೇ ನಿವೇಶನಗಳನ್ನು ನೀಡಬೇಕಾಗಿತ್ತು. ಈಗ ನಡೆದಿರುವುದರಲ್ಲಿ ಮುಡಾ ಅಧಿಕಾರಿಗಳ ಲೋಪವಿದೆ’ ಎಂದು ಮಂಜೇಗೌಡ ಪ್ರತಿಕ್ರಿಯಿಸಿದರು.
0 ಕಾಮೆಂಟ್‌ಗಳು