ಅಪ್ಪ ಪಿಎಮ್ಮು, ಮಗ ಸಿಎಮ್ಮು ಆಗಿದ್ದಾಗಲೇ ಕಾವೇರಿ ಸಮಸ್ಯೆ ಇತ್ಯರ್ಥವಾಗಿಲ್ಲ

ಕೆಪಿಸಿಸಿ ಸದಸ್ಯ ಡಾ.ಆನಂದ್ ಕುಮಾರ್ ವ್ಯಂಗ್ಯ

ಮೈಸೂರು : ದೇವೇಗೌಡ್ರು ರಾಜ್ಯದ ಮುಖ್ಯಮಂತ್ರಿ ದೇಶದ ಪ್ರಧಾನಿ ಆಗಿದ್ದಾಗಲೇ ಅಥವಾ ಅವರ ಮಗ ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿಲ್ಲ. ಇನ್ನು ಕುಮಾರಸ್ವಾಮಿ ಈಗ ಸಂಸದರಾದರೆ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತೆ ಎನ್ನುವುದೆಲ್ಲಾ ಓಟು ಗಿಟ್ಟಿಸುವ ತಂತ್ರವಾಗಿದ್ದು, ಅವರಿಂದ ಯಾವುದೇ ಸಮಸ್ಯೆಗೆ ಪರಿಹಾರ ಅಸಾಧ್ಯ ಎಂದು ಕೆಪಿಸಿಸಿ ಸದಸ್ಯ ಡಾ.ಆನಂದ್ ಕುಮಾರ್ ವ್ಯಂಗ್ಯವಾಡಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಎಂ.ಲಕ್ಷ್ಮಣ್, ಚಾಮರಾಜನಗರದಲ್ಲಿ ಸುನಿಲ್ ಬೋಸ್ ಮತ್ತು ಮಂಡ್ಯದಲ್ಲಿ ಸ್ಟಾರ್‌ಚಂದ್ರು ಗೆಲುವು ನಿಶ್ಚಿತವಾಗಿದೆ. ಕಾಂಗ್ರೆಸ್ ಪಕ್ಷದ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಮತದಾರರು ನಂಬಿದ್ದಾರೆ. ನಾವು ಕೇಂದ್ರದಲ್ಲೂ ಅಧಿಕಾರ ಹಿಡಿದು ದೇಶದ ಜನತೆಗೆ ಪಂಚ ನ್ಯಾಯಗಳ ಮೂಲಕ ೨೫ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಜನರ ಬದುಕು ಸುಧಾರಣೆ ಮಾಡುತ್ತೇವೆ ಎಂದರು.

ಮಂಡ್ಯ ಮತ್ತು ಮೈಸೂರು ಲೋಕಸಭಾ ಚುನಾವಣೆ ದೇಶದ ಗಮನ ಸೆಳೆದಿದೆ. ಮಂಡ್ಯದಲ್ಲಿ ೨ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಎದುರು ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತ ಸ್ಪರ್ಧಿಸಿದ್ದಾರೆ. ಇದು ಸಚಿವ ಎನ್.ಚಲುವರಾಸ್ವಾಮಿ ಅವರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ, ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಹಸಿರು ನಿಶಾನೆ ತೋರಿದ್ದಾರೆ. ಇದು ಕಣ್ಣಿಗೆ ಕಾಣುವ ಅಭಿವೃದ್ಧಿಯಾಗಿದೆ. ಅದನ್ನು ಬಿಟ್ಟು ಗೆದ್ದರೆ ಅದು ಮಾಡ್ತೀನಿ, ಇದು ಮಾಡ್ತೀನಿ ಎನ್ನುವುದೆಲ್ಲಾ ನೀರಿನ ಮೇಲಿನ ಗುಳ್ಳೆಗಳಿದ್ದಂತೆ ಎಂದು ವ್ಯಂಗ್ಯವಾಡಿದರು.
ಇನ್ನು ಮೈಸೂರಿನಲ್ಲಿ ರಾಜವಂಶಸ್ಥರ ಎದುರು ಒಬ್ಬ ಸಾಮಾನ್ಯ ಪ್ರಜೆ ಸ್ಪರ್ಧೆ ಮಾಡುತ್ತಿರುವುದು ಪ್ರಜಾಪ್ರಭುತ್ವದ ಒಂದು ಸುಂದರ ನೋಟವಾಗಿದೆ. ಇಲ್ಲೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗೆಲುವು ನಿಶ್ಚಿತ ಎಂದು ಡಾ.ಆನಂದ್ ಕುಮಾರ್ ಭರವಸೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಅರ್ಜುನ್ ಆನಂದ್ ಮಾತನಾಡಿ, ೧೦ ವರ್ಷ ನರೇಂದ್ರ ಮೋದಿಯವರಿಗೆ ದೇಶದ ಜನತೆ ಅವಕಾಶ ಕೊಟ್ಟು ಅವರ ಆಡಳಿತವನ್ನು ಕಣ್ಣಾರೆ ಕಂಡು ಅನುಭವಿಸಿ ಕಣ್ಣೀರು ಹಾಕಿದ್ದಾರೆ. ಈಗ ೫ ವರ್ಷ ರಾಹುಲ್ ಗಾಂಧಿ ಅವರಿಗೂ ಅವಕಾಶ ನೀಡಬೇಕು. ರಾಹುಲ್ ಗಾಂಧಿಯವರು ಯುವಕರು, ವಿದ್ಯಾವಂತರು, ದೇಶದ ಅಭಿವೃದ್ಧಿಯ ಬಗ್ಗೆ ಕನಸು ಹೊತ್ತವರು, ಯುವಕರ ಕಣ್ಮಣಿಯಾಗಿದ್ದಾರೆ. ದೇಶದ ಉದ್ದಗಲಕ್ಕೂ ಪಾದಯಾತ್ರೆ ಮಾಡಿ ಜನರ ಬದುಕು, ಕಷ್ಟ ಸುಖಗಳನ್ನು ಕಣ್ಣಾರೆ ಕಂಡಿದ್ದಾರೆ. ಅವರಿಗೆ ಈ ಬಾರಿ ಅವಕಾಶ ನೀಡಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಅಂಕೋಲ, ನಂಜೇಗೌಡ ಮತ್ತಿತರರು ಇದ್ದರು. 
   
  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು