ನೇಹಾ, ರುಕ್ಸಾನ ಸಾವಿಗೆ ನ್ಯಾಯ ಸಿಗಲೇಬೇಕು: ಎಸ್‌ಡಿಪಿಐ ಮೈಸೂರು ಜಿಲ್ಲಾಧ್ಯಕ್ಷ ರಫತ್ ಖಾನ್ ಆಗ್ರಹ

 

ಮೈಸೂರು : ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕೊಲೆಯಾದ ನೇಹಾ ಹಿರೇಮಠ ಮತ್ತು ತುಮಕೂರಿನಲ್ಲಿ ಕೊಲೆಯಾದ ಮೈಸೂರಿನ ರುಕ್ಸಾನ ಸೇರಿದಂತೆ ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಕೊಲೆಗೀಡಾದ ಅಮಾಯಕ ಯುವತಿಯರ ಸಾವಿಗೆ ನ್ಯಾಯ ದೊರಕಿಸುವಲ್ಲಿ ನಮ್ಮ ಪಕ್ಷ ಬದ್ಧವಾಗಿದೆ ಎಂದು ಎಸ್‌ಡಿಪಿಐ ಮೈಸೂರು ಜಿಲ್ಲಾ ಅಧ್ಯಕ್ಷ ರಫತ್ ಖಾನ್ ಹೇಳಿದ್ದಾರೆ. 
ಮೈಸೂರಿನಲ್ಲಿ ಮಾಧ್ಯಮ ಹೇಳಿಕೆ ನೀಡಿರುವ ಅವರು, 
ಇತ್ತೀಚೆಗೆ ಹತ್ಯೆಯಾದ ನೇಹಾ ಹಿರೇಮಠ ಎಂಬ ಯುವತಿಯ ಕೊಲೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿದಂತೆ ಇತರೆ ಅಮಾಯಕ ಹೆಣ್ಣುಮಕ್ಕಳ ಕೊಲೆ ಪ್ರಕರಣವನ್ನೂ ಸಹ ಸರ್ಕಾರ ಯಾವುದೇ ತಾರತಮ್ಯ ಮಾಡದೆ ತನಿಖೆ ನಡೆಸಬೇಕು ಎಂದು ಕೋರಿದರು. 
ನೇಹಾ ಕೊಲೆ ಆರೋಪಿ ಮುಸ್ಲಿಂ ಆದ ಕಾರಣ ಬಿಜೆಪಿ ಇದಕ್ಕೆ ಕೋಮುಬಣ್ಣ ಹಚ್ಚಿ ಲವ್ ಜಿಹಾದ್ ಎಂದು ಹೇಳಿರುವುದು ಸರಿಯಲ್ಲ. ಒಂದು ವೇಳೆ ಅದು ಲವ್‌ಜಿಹಾದ್ ಆದರೇ, ಮಾರ್ಚ್ ೩೧ ರಂದು ತುಮಕೂರಿನ ಬಳಿ ಪ್ರದೀಪ್ ಎಂಬ ಆರೋಪಿ ರುಕ್ಸಾನ ಎಂಬ ಮುಸ್ಲಿಂ ಯುವತಿಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿ ಆಕೆಯ ಒಂದೂವರೆ ತಿಂಗಳ ಮಗುವನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾನೆ. ಈ ಕೊಲೆಯನ್ನು ಆರ್‌ಎಸ್‌ಎಸ್ ಲವ್‌ಟ್ರ್ಯಾಪ್ ಎಂದು ಬಿಜೆಪಿ ಒಪ್ಪುತ್ತದೆಯೇ ಎಂದು ಅವರು ಸವಾಲು ಹಾಕಿದರು.
ಯಾವುದ್ಯಾವುದೋ ಕಾರಣಗಳಿಗೆ ಅನಾಹುತಗಳು ನಡೆದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಹೆಸರುಗಳು ಕೇಳಿದ ತಕ್ಷಣ ಅದಕ್ಕೆ ಕೋಮು ಬಣ್ಣ ಕಟ್ಟುವ ಬಿಜೆಪಿ, ಮೂರು ವರ್ಷದ ಹಿಂದೆ ಪುತ್ತೂರಿನ ಸಂಘ ಪರಿವಾರದ ಕಾಲೇಜೊಂದರ ವಿದ್ಯಾರ್ಥಿಗಳು ಅದೇ ಕಾಲೇಜಿನ ಯುವತಿಯನ್ನು ಗ್ಯಾಂಗ್ ರೇಪ್ ಮಾಡಿ ಅದರ ವಿಡಿಯೋ ವೈರಲ್ ಮಾಡಿದ್ದರು. ೨ ವರ್ಷಗಳ ಹಿಂದೆ ಇದೇ ಪುತ್ತೂರಿನ ಅನಂತಾಡಿಯಲ್ಲಿ ಶಕುಂತಳಾ ಎಂಬ ಯುವತಿಯನ್ನು ಶ್ರೀಧರ್ ಎಂಬ ಯುವಕ ಹಾಡ ಹಗಲೇ ರಸ್ತೆಯಲ್ಲಿ ಇರಿದು ಕೊಲೆ ಮಾಡಿದ್ದನು. ೧೨ ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾಳ ಕೊಲೆ, ೬ ವರ್ಷಗಳ ಹಿಂದೆ ಹುಬ್ಬಳ್ಳಿ ಎನ್‌ಎಂಸಿ ಕಾಲೇಜಿನಲ್ಲಿ ಅಕ್ಷತಾ ಎಂಬ ವಿದ್ಯಾರ್ಥಿನಿಯನ್ನು ಎಬಿವಿಪಿ ಸಂಘಟನೆಗೆ ಸೇರಿದ ಕಾರ್ತಿಕ್ ಎಂಬ ಯುವಕ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ಕಳೆದ ಆರು ತಿಂಗಳ ಹಿಂದೆ ಪುತ್ತೂರಿನ ಗೌರಿ ಎಂಬ ಯುವತಿಯನ್ನು ಪದ್ಮರಾಜ್ ಎಂಬಾತ ಕೊಲೆ ಮಾಡಿದ್ದನು. ಈ ಕೊಲೆಗಳ ಬಗ್ಗೆ ಭಾರತೀಯ ಜನತಾ ಪಕ್ಷದ ನಾಯಕರು ಮೌನಕ್ಕೆ ಜಾರಿದ್ದು ಏಕೆ? ಬಿಜೆಪಿ ಧರ್ಮ, ಜಾತಿ ಹೆಸರಲ್ಲಿ ಹೆಣದ ಮೇಲೆ ರಾಜಕಾರಣ ಮಾಡುವುದನ್ನು ಬಿಟ್ಟು ನ್ಯಾಯಯ ಪರ ನಿಲ್ಲುವಂತಾಗಲಿ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು