ಮಲ್ಲಿಕಾರ್ಜುನ ಖರ್ಗೆಗೆ ಪ್ರಧಾನಿಯಾಗುವ ಶಕ್ತಿ, ಜನಬೆಂಬಲ ಇಲ್ಲ : ಜಿ.ಟಿ.ದೇವೇಗೌಡ

ಏಕ ದೇಶ, ಏಕ ವ್ಯಕ್ತಿ, ಏಕ ಕಾನೂನು ನರೇಂದ್ರ ಮೋದಿ ಇಂಗಿತ ಅವರು ಪ್ರಧಾನಿಯಾಗಲು ನಮ್ಮ ಬೆಂಬಲವಿದೆ ಎಂದ ಜಿಟಿಡಿ

ಮೈಸೂರು: ಈ ದೇಶದ ಪ್ರಧಾನಿ ಆಗುವ ಶಕ್ತಿ ಮತ್ತು ಜನಬೆಂಬಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಟ್ರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಥವಾ ಇನ್ಯಾರಿಗೂ ಇಲ್ಲ ಎಂದು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಬುಧವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, 
ಏಕ ದೇಶ, ಏಕ ವ್ಯಕ್ತಿ, ಏಕ ಕಾನೂನು ದೇಶದಲ್ಲಿ ಜಾರಿ ಆಗಬೇಕು ಎನ್ನುವುದು ನರೇಂದ್ರ ಮೋದಿ ಅವರ ಇಂಗಿತ. ಹಾಗಾಗಿ ಪ್ರಧಾನ ಮಂತ್ರಿ ಆಗೋ ಶಕ್ತಿ ಅರ್ಹತೆ ನರೇಂದ್ರ ಮೋದಿ ಅವರಿಗೆ ಬಿಟ್ಟರೆ ದೇಶದಲ್ಲಿ ಬೇರೆ ಯಾರಿಗೂ ಇಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಜಾತ್ಯತೀತ ಶಕ್ತಿಗಳು ಸೇರಿದಂತೆ ಇಂಡಿಯಾ ಮೈತ್ರಿಕೂಟದ ಅನೇಕರು ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಪಕ್ಷಕ್ಕೆ ಐದು ಸ್ಥಾನವನ್ನು ಬಿಜೆಪಿ ಬಿಟ್ಟುಕೊಡಲಿದೆ.  ಮಂಡ್ಯ, ಮೈಸೂರು, ಹಾಸನ, ತುಮಕೂರು, ಕೋಲಾರ, ರಾಯಚೂರು, ಬಿಜಾಪುರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆಗಳಲ್ಲಿ ನಮ್ಮ ಶಕ್ತಿ ಪ್ರಬಲವಾಗಿದೆ. ನಾವು ಎಲ್ಲಿ, ಎಷ್ಟು ಕಡೆ ಸ್ಪರ್ಧೆ ಮಾಡಬೇಕೆಂಬುದು ಇನ್ನೂ ತೀರ್ಮಾನವಾಗಿಲ್ಲ. ಅಲ್ಲದೇ ನಮಗೆ ಅವರು ಎಷ್ಟು ಸ್ಥಾನ ಬಿಟ್ಟುಕೊಡುತ್ತಾರೆ ಎನ್ನುವುದು ಮುಖ್ಯವಲ್ಲ ದೇಶದಲ್ಲಿ ಮೂರನೇ ಬಾರಿಗೂ ನರೇಂದ್ರ ಮೋದಿಯೇ ಪ್ರಧಾನಮಂತ್ರಿ ಆಗಬೇಕು ಎನ್ನುವುದು ಮುಖ್ಯ ಹಾಗಾಗಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.
ಜಾತ್ಯಾತೀತ ಶಕ್ತಿಗಳೆಲ್ಲಾ ಒಂದಾಗಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಲಿದ್ದಾರೆ. ಈ ದೇಶದಲ್ಲಿ ಪ್ರಧಾನಿಯಾಗುವ ಶಕ್ತಿ  ಮೋದಿ ಒಬ್ಬರಿಗೆ ಮಾತ್ರವಿದೆ. ಅವರನ್ನು ಬಿಟ್ಟರೆ ಇನ್ಯಾರಿಗೂ ಆ ಶಕ್ತಿ ಇಲ್ಲ ಎಂದು ಒತ್ತಿ ಹೇಳಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು