ಚಾಮರಾಜನಗರ ಆಕ್ಸಿಝನ್ ದುರಂತ : ೫೦ ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ನೀಡುವಂತೆ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹ
ಜೂನ್ 06, 2023
ಚಾಮರಾಜನಗರ : ಇಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರ್ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಸ್ಥರಿಗೆ ತಲಾ 50 ಲಕ್ಷ ರೂ. ಪರಿಹಾರ ಹಾಗೂ ಸಂತ್ರಸ್ತ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವುದೂ ಸೇರಿದಂತೆ ಈ ದುರ್ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ
ಎಸ್‌ಡಿಪಿಐ
ರಾಜ್ಯಾಧ್ಯಕ್ಷ ಅಬ್ದುಲ್ ಮಜಿದ್ ಒತ್ತಾಯಿಸಿದರು.
ಸೋಮವಾರ ನಗರದಲ್ಲಿ ಕೋವಿಡ್ ಆಕ್ಸಿಝನ್ ದುರಂತದಲ್ಲಿ ಸಾವನ್ನಪ್ಪಿದ
ಕುಟುಂಬಗಳ ಸದಸ್ಯರೊಂದಿಗೆ ನಡೆದ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
02-05-2021ರ ಭಾನುವಾರ ಮಧ್ಯರಾತ್ರಿ ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ
ಆಕ್ಸಿಜನ್ ಪೂರೈಕೆಯಾಗದೆ 37 ಮಂದಿ ಮೃತರಾಗಿ ಈಗಾಗಲೇ ಒಂದು ವರ್ಷ ಕಳೆದಿದೆ. ಘಟನೆಗೆ ಸಂಬಂಧಿಸಿದಂತೆ, ಈಗಾಗಲೇ ನ್ಯಾಯಮೂರ್ತಿ ವೇಣುಗೋಪಾಲಗೌಡ ಅವರು ತಮ್ಮ ಪ್ರಾಥಮಿಕ ತನಿಖಾ ವರದಿಯಲ್ಲಿ ಘಟನೆಗೆ ಆಕ್ಸಿಜನ್ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಅಂದಿನ ಚಾಮರಾಜನಗರ ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಕುರಿತು "ಸಂದರ್ಭಕ್ಕೆ ತಕ್ಕಂತೆ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರಿಸುವಲ್ಲಿ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ" ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇಷ್ಟಾದರೂ ಸಹ ಜಿಲ್ಲಾಧಿಕಾರಿಗಳು ಸೇರಿದಂತೆ ಯಾವ ಒಬ್ಬ ವೈದ್ಯಾಧಿಕಾರಿಯ ವಿರುದ್ಧ ಸಹ ಸರ್ಕಾರ ಇಲ್ಲಿಯವರೆಗೂ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಇನ್ನೊಂದು ಕಡೆ ಸರ್ಕಾರ ನೇಮಕ ಮಾಡಿರುವ ಏಕಸದಸ್ಯ ಜಿ.ಎ.ಪಾಟೀಲ್ ಆಯೋಗದ ವರದಿ ಸಹ ಬಹಿರಂಗಗೊಂಡಿಲ್ಲ. ಒಟ್ಟು 37 ಮೃತರ ಕುಟುಂಬಸ್ಥರ ಪೈಕಿ ಕೇವಲ 24 ಮಂದಿಯ ಕುಟುಂಬಸ್ಥರಿಗೆ ಅಲ್ಪಸ್ವಲ್ಪ ಪರಿಹಾರ ನೀಡಿದೆ. ಇನ್ನು 13 ಸಂತ್ರಸ್ಥ ಕುಟುಂಬಸ್ಥರಿಗೆ ಪರಿಹಾರದ ಒಂದು ನಯಾಪೈಸೆ ಸಹ ಸಿಕ್ಕಿರುವುದಿಲ್ಲದಿರುವುದು ಅತ್ಯಂತ ದುರದೃಷ್ಟಕರ. ಎಂದರು.
ದುರ್ಘಟನೆಗೆ ಬಲಿಯಾದವರಲ್ಲಿ ಶೇಕಡ 50ಕ್ಕಿಂತ ಹೆಚ್ಚು ಎಸ್.ಸಿ./ಎಸ್.ಟಿ. ಸಮುದಾಯದವರು ಹಾಗೂ ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಆಧಾರ ಸ್ಥಂಭವಾಗಿದ್ದ ಮನೆಯ ಯಜಮಾನ ಇಲ್ಲದೇ ಈ ಬಡಪಾಯಿ ಕುಟುಂಬಸ್ಥರ ಜೀವನ ಅಸ್ತವ್ಯಸ್ತವಾಗಿದ್ದು, ಸಂತ್ರಸ್ತರ ಕುಟುಂಬಸ್ಥರಲ್ಲಿ, ಮಕ್ಕಳು ಸಹ ಇದ್ದು, ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಆರೈಕೆಗೆ ಬಹಳ ತೊಂದರೆ ಆಗುತ್ತಿದೆ. ಸಂತ್ರಸ್ಥರ ಈ ದುಃಸ್ಥಿತಿಯನ್ನು ನೋಡಿಕೊಂಡು ಅಂದಿನ ಬಿ.ಜೆ.ಪಿ. ಸರ್ಕಾರ ಕಣ್ಣಿದ್ದು ಕುರುಡರಂತೆ ವರ್ತಿಸಿದ್ದು, ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯಪಾಲರಿಗೆ ಸಂತ್ರಸ್ತರ ಪರ ಮನವಿ ನೀಡಲಾಗಿದೆ. ಕೂಡಲೇ ಸಕಾರ ಮೃತರ ಕುಟುಂಬಕ್ಕೆ
ತಲಾ 50 ಲಕ್ಷ ರೂ. ಪರಿಹಾರ, ಹಾಗೂ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ನಾವು ಮನವಿ ನೀಡಿರುತ್ತೇವೆ ಎಂದರು.
ಪ್ರಸ್ತುತ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿರುವ ಸರ್ಕಾರ ಆಕ್ಸಿಜನ್ ದುರ್ಘಟನೆ ಸಂಬಂಧ ಮರು ತನಿಖೆ ಮಾಡುವ ಕುರಿತು ಪ್ರಸ್ತಾಪ ಮಾಡಿರುವುದು ಸ್ವಾಗತಾರ್ಹ. ತನಿಖೆ ಪ್ರಾರಂಭ ಮಾಡುವ ಮುಂಚೆ ದುರ್ಘಟನೆ ಸಂದರ್ಭದಲ್ಲಿದ್ದ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳನ್ನು ತಕ್ಷಣ ಅಮಾನತ್ತು ಮಾಡಿ ತನಿಖೆ ಪ್ರಾರಂಭಿಸಬೇಕು, ಬಹಳ ಮುಖ್ಯವಾಗಿ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲ್ ಗೌಡರವರ ಪ್ರಾಥಮಿಕ ವರದಿಯಲ್ಲಿ ಪ್ರಸ್ತಾಪಿಸಿರುವಂತೆ ಸಾವಿಗೀಡಾದ 37 ಮಂದಿಯ ಕುಟುಂಬಸ್ಥರಿಗೆ ತಲಾ 50 ಲಕ್ಷ ಪರಿಹಾರ ಹಾಗೂ ಸಂತ್ರಸ್ತ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು, ಏಕೆಂದರೆ ಈಗಾಗಲೇ ಈ ದುರ್ಘಟನೆಯಾಗಿ 2 ವರ್ಷಗಳು ಕಳೆದು ಹೋಗಿದೆ. ಇನ್ನು ಮತ್ತೊಮ್ಮೆ ಹೊಸ ತನಿಖೆ ಮಾಡಿ ಸಂತ್ರಸ್ತರಿಗೆ ಪರಿಹಾರ ನೀಡುವುದಾದರೆ ಸುದೀರ್ಘವಾದ ಕಾಲಹರಣವಾಗುತ್ತೆ. ಆದುದರಿಂದ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ತಕ್ಷಣ ಪರಿಹಾರ ಘೋಷಿಸಬೇಕೆಂದು ಅಬ್ದುಲ್ ಮಜೀದ್ ಆಗ್ರಹಿಸಿದರು.
ಸಭೆಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್ ಆಹಮ್ಮದ್,
ರಾಜ್ಯ ಸಮಿತಿ ಸದಸ್ಯರಾದ ಅಮ್ಜದ್ ಖಾನ್, ಜಿಲ್ಲಾ ಉಪಾಧ್ಯಕ್ಷ ಸೈಯದ್ ಆರೀಫ್,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್. ಎಂ,
ಜಿಲ್ಲಾ ಖಜಾಂಚಿ ನಯಾಜ್ ಉಲ್ಲಾ, ನಗರಸಭಾ ಸದಸ್ಯರಾದ ಖಲೀಲ್ ಉಲ್ಲಾ, ಮೊಹಮ್ಮದ್ ಅಮೀಕ್, ಮುಖಂಡರಾದ ಇಸ್ರಾರ್ ಪಾಷ ಹಾಗೂ ಸಂತ್ರಸ್ತ ಕುಟುಂಬದ ಸದಸ್ಯರು ಹಾಜರಿದ್ದರು.
0 ಕಾಮೆಂಟ್‌ಗಳು