ಬ್ಯಾಂಕುಗಳು ಗ್ರಾಹಕ ಸ್ನೇಹಿಯಾಗಿರಬೇಕು: ಮೇಜರ್ ಮಂಜುನಾಥ್

ಮೈಸೂರಿನಲ್ಲಿ ಫೆಡರಲ್ ಬ್ಯಾಂಕ್‌ನ ೩ನೇ ನೂತನ ಶಾಖೆ ಲೋಕಾರ್ಪಣೆ

ಮೈಸೂರು : ಬ್ಯಾಂಕುಗಳು ಸದಾಕಾಲ ಗ್ರಾಹಕ ಸ್ನೇಹಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ೧೩ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ವಿಭಾಗದ ಆಡಳಿತಾಧಿಕಾರಿ ಮೇಜರ್ ಜೆ.ಮಂಜುನಾಥ್ ಹೇಳಿದರು.
ಮೈಸೂರು ಕುವೆಂಪುನಗರದ ಚಾಮರಾಜ ಮೊಹಲ್ಲಾದಲ್ಲಿ ಫೆಡರಲ್ ಬ್ಯಾಂಕ್‌ನ ೩ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಬ್ಯಾಂಕಿನ ಸ್ಟ್ರಾಂಗ್ ರೂಂ ಮತ್ತು ಸೇಫ್ ಡಿಪಾಸಿಟ್ ಲಾಕರ್ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರು ತಮ್ಮ ಉಳಿತಾಯದ ಹಣ ಹಾಗೂ ಬೆಲೆ ಬಾಳುವ ವಸ್ತುಗಳ  ಭದ್ರತೆಗೆ ಬ್ಯಾಂಕುಗಳನ್ನೇ ನಂಬಿರುತ್ತಾರೆ. ಅಲ್ಲದೇ ಹಲವಾರು ಜನರು ಸಾಲ ಸೌಲಭ್ಯಗಳನ್ನು ಪಡೆದು ತಮ್ಮ ವ್ಯವಹಾರಗಳಲ್ಲಿ ತೊಡಗಿಸಿರುತ್ತಾರೆ. ಕೆಲವೊಮ್ಮೆ ವ್ಯವಹಾರದಲ್ಲಿ ನಷ್ಟ ಸಂಭವಿಸಿ ಸುಸ್ತಿದಾರರೂ ಆಗಬಹುದು. ಅಂತಹ ಸಂದರ್ಭದಲ್ಲಿ ಬ್ಯಾಂಕುಗಳು ತಮ್ಮ ಸುಸ್ತಿದಾರ ಗ್ರಾಹಕರ ಜತೆ ಅತ್ಯಂತ ಸ್ನೇಹದಿಂದ ವರ್ತಿಸಿ ವ್ಯವಹಾರದ ಆರ್ಥಿಕ ನಷ್ಟಗಳನ್ನು ಪರಿಶೀಲಿಸಿ ಕಾಲಾವಕಾಶ ನೀಡುವ ಮೂಲಕ ತಮ್ಮ ಗ್ರಾಹಕರ ನೆರವಿಗೆ ನಿಲ್ಲಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲ್ಸೆ ಅವರು ನೂತನ ಶಾಖೆಯನ್ನು ಉದ್ಘಾಟಿಸಿದರು.

ಇದೇ ವೇಳೆ ನಯನ ಕುಮಾರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ.ಕುಮಾರ್ ಬ್ಯಾಂಕ್ ಕಟ್ಟಡದಲ್ಲೇ ಇರುವ ನೂತನ ಎಟಿಎಂ ಕೇಂದ್ರವನ್ನು ಉದ್ಘಾಟಿಸಿದರು. ಜತೆಗೆ ಫೆಡರಲ್ ಬ್ಯಾಂಕ್‌ನ ಉಪಾಧ್ಯಕ್ಷ ಹಾಗೂ ಬೆಂಗಳೂರು ಪ್ರಾದೇಶಿಕ ವಿಭಾಗದ ಮುಖ್ಯಸ್ಥರಾದ ಕೆ.ವಿ.ಶಿಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಬಿ.ಆರ್.ವರುಣ್ ಮತ್ತಿತರ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು