ʻಅಕ್ಕಿʼ ರಾಜಕೀಯ ಖಂಡಿಸಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಜೂನ್ 18, 2023
ಮೈಸೂರು : ಹಣ ಕೊಟ್ಟರೂ ಕೇಂದ್ರ
ಸರ್ಕಾರ ರಾಜ್ಯಕ್ಕೆ ಅಕ್ಕಿ ನೀಡುತ್ತಿಲ್ಲ. ಬಿಜೆಪಿಯ ಸಂಸದರೂ ಸೇರಿದಂತೆ ಪ್ರಧಾನಿ ಕೂಡ ಕರ್ನಾಟಕದ
ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದು, ಕೂಡಲೇ ಎಫ್‌ಸಿಐ ಗೋಡೌನ್‌ನಿಂದ ಪಡಿತರ ಅಕ್ಕಿ ವಿತರಿಸಿ
ಬಡವರ ಹಸಿವು ನೀಗಿಸಬೇಕೆಂದು ಒತ್ತಾಯಿಸಿ ನಗರ ವಕ್ತಾರ ರಾಜೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು
ಪ್ರತಿಭಟನೆ ನಡೆಸಿದರು. ಭಾನುವಾರ ಬೆಳಗ್ಗೆ ಮೈಸೂರು ಬೆಂಗಳೂರು
ಹೆದ್ದಾರಿಯ ಗಾಂಧಿನಗರದ ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರದ
ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್
ವಕ್ತಾರ ರಾಜೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಬಡವರಿಗೆ ತಲಾ
೧೦ ಕೆಜಿ ಉಚಿತವಾಗಿ ಅಕ್ಕಿ ಕೊಡುವ ಬಗ್ಗೆ ವಾಗ್ದಾನ ಮಾಡಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ
ಅಧಿಕಾರಕ್ಕೆ ಬಂದ ತಕ್ಷಣ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ಅಕ್ಕಿ ಖರೀದಿ ಬಗ್ಗೆ ಮಾತುಕತೆ ನಡೆಸಿತ್ತು.
ಮೊದಲು ಅಕ್ಕಿ ಕೊಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಈಗ ಇದ್ದಕ್ಕಿದ್ದಂತೆ ಅಕ್ಕಿ ಕೊಡುವುದಿಲ್ಲ
ಎನ್ನುತ್ತಿದೆ. ಇದು ಮಹಾ ಮೋಸ. ಬಡವರ ಹಸಿವಿನ ಜತೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಕಿಡಿ
ಕಾರಿದರು.
ಸಿದ್ದರಾಮಯ್ಯ ಸರ್ಕಾರ ಅಕ್ಕಿ
ಉಚಿತವಾಗಿ ಕೇಳಿಲ್ಲ. ಹಣ ಕೊಟ್ಟು ಖರೀದಿಸುತ್ತಿದೆ. ಎಫ್‌ಸಿಐ ಗೋಡೌನ್‌ಗಳಲ್ಲಿ ಲಕ್ಷಾಂತರ ಟನ್ ಅಕ್ಕಿ
ಕೊಳೆಯುತ್ತಿದೆ. ಆದರೇ, ಕರ್ನಾಟಕ ರಾಜ್ಯಕ್ಕೆ ಮಾತ್ರ ಕೊಡುವುದಿಲ್ಲ ಎನ್ನುತ್ತಿದ್ದಾರೆ. ರಾಜ್ಯದಲ್ಲಿ
ಬಿಜೆಪಿಯಿಂದ ಚುನಾಯಿತರಾಗಿರುವ ಎಲ್ಲಾ ಸಂಸದರೂ ಸಹ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಇವರೆಲ್ಲರಿಗೂ
ಬಡವರು ಹೊಟ್ಟೆ ತುಂಬಾ ಊಟ ಮಾಡುವುದು ಇಷ್ಟವಿಲ್ಲ. ಅದಾನಿ, ಅಂಬಾನಿ ಅಂತಹ ಶ್ರೀಮಂತರ ಪರವಾಗಿರುವ
ಬಿಜೆಪಿ ಸರ್ಕಾರದಲ್ಲಿ ಬಡವರು ಹೊಟ್ಟೆ ಹಸಿದು ಸತ್ತರೂ ಕೇಳುವವರಿಲ್ಲ. ಕೂಡಲೇ ನಮ್ಮ ರಾಜ್ಯದ ಬಡವರ
ಹಸಿವು ನೀಗಿಸಲು ಪಡಿತರ ಅಕ್ಕಿ ಬಿಡುಗಡೆ ಮಾಡಬೇಕು ಇಲ್ಲದಿದ್ದಲ್ಲಿ ಬಿಜೆಪಿ ವಿರುದ್ಧ ರಾಜ್ಯವ್ಯಾಪಿ
ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್
ಮುಖಂಡರಾದ ಮನೋಜ್, ಕಾರ್ತಿಕ್, ರಾಘವ, ರಾಜಣ್ಣ, ಸುರೇಶ್ ಕುಮಾರ್, ಪ್ರವೀಣ್, ಕುಮಾರ್, ಪ್ರಕಾಶ್,
ನವೀದ್, ಸಿದ್ದರಾಜು ಮುಂತಾದವರು ಇದ್ದರು.
0 ಕಾಮೆಂಟ್‌ಗಳು