ಸುಮಲತಾ ನನಗೂ ಬೆಂಬಲ ನೀಡುವುದಾಗಿ ಹೇಳಿದ್ದಾರೆ : ಬಿಜೆಪಿ ಅಭ್ಯರ್ಥಿ ಡಾ. ಎನ್.ಎಸ್.ಇಂದ್ರೇಶ್ ಸ್ಪಷ್ಟನೆ

 

ಪಾಂಡವಪುರ: ಸಂಸದೆ ಸುಮಲತಾ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಬೆಂಬಲ ನೀಡುತ್ತಿದ್ದು, ಈ ಬಗ್ಗೆ ಎರಡು  ಬಾರಿ ನನ್ನೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಇಂದ್ರೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 
ರೈತಸಂಘ-ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸುಮಲತಾ ಬೆಂಬಲ ನೀಡಿರುವುದಾಗಿ ಸ್ವತಃ ದರ್ಶನ್ ಅವರೇ ಹೇಳಿದ್ದು, ಈ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಇಂದ್ರೇಶ್ ಪ್ರತಿಕ್ರಿಯಿಸಿದರು.
ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ ಬಳಿಕ ನನ್ನನ್ನು ಎರಡು ಬಾರಿ ಕರೆದು ಚುನಾವಣೆಗೆ ಸಂಬಂಧಿಸಿದಂತೆ ಹಲವಾರು ಸೂಚನೆ, ಸಲಹೆಗಳನ್ನು ಕೊಟ್ಟಿದ್ದಾರೆ. ಅವರು ಎಲ್ಲಿಯೂ ರೈತಸಂಘದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿಲ್ಲ. ಮೇಲುಕೋಟೆ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡೋಕೆ ಬರುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಸಂಸದೆ ಸುಮಲತಾ ಅಂಬರೀಶ್ ಅವರು ಮೇಲುಕೋಟೆ ಕ್ಷೇತ್ರದ ಪ್ರಚಾರಕ್ಕೆ ಬಾರದೆ ಇರುವುದು ಸಹ ತಂತ್ರಗಾರಿಕೆಯ ಒಂದು ಭಾಗವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಪಕ್ಷದ ಪ್ರಣಾಳಿಕೆಗಳು ಸರ್ವವ್ಯಾಪಿ ಮತ್ತು ಸರ್ವ ಸ್ಪರ್ಷಿ ಎಂದು ಹೇಳಿದ ಅವರು, 
ರಾಜ್ಯದ ಬೊಕ್ಕಸಕ್ಕೆ ಹೊರೆಯಾಗದಂತೆ ಜನ ಸಾಮಾನ್ಯರಿಗೆ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಪಿಎಲ್ ಕಾರ್ಡ್‍ದಾರರಿಗೆ ಉಚಿತ ಮೂರು ಸಿಲಿಂಡರ್, ಪ್ರತಿದಿನ ಅರ್ಧ ಲೀಟರ್ ಹಾಲು, 10 ಲಕ್ಷ ವಸತಿ, ಸರಕಾರಿ ಶಾಲೆಗಳ ಉನ್ನತೀಕರಣ, ದೇವಸ್ಥಾನಗಳ ನಿರ್ವಹಣೆಗೆ ಕ್ರಮ, ಪ್ರವಾಸೋದ್ಯಮಕ್ಕೆ ಒತ್ತು ಸೇರಿದಂತೆ ಹಲವು ಭರವಸೆಗಳನ್ನು ಪ್ರಣಾಳಿಕೆಯನ್ನು ಘೋಷಿಸಿದೆ ಎಂದರು.
ವಿರೋಧ ಪಕ್ಷದವರು ನಮ್ಮ ಬಗ್ಗೆ ಆರೋಪ ಮಾಡುವುದು ಸರ್ವೇ ಸಾಮಾನ್ಯ, ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ಅಲ್ಲದೆ ಹೆಚ್ಚುವರಿಯಾಗಿ ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಓಲೈಕೆಗಾಗಿ ರಾಜಕಾರಣ ಭರವಸೆಗಳನ್ನು ನೀಡಲ್ಲ. ಕೊಟ್ಟ ಭರವಸೆಯಂತೆ ಶ್ರೀರಾಮಮಂದಿರ ನಿರ್ಮಾಣ, ಆರ್ಟಿಕಲ್ 370 ರದ್ದು ಹಾಗೂ ತ್ರಿವಳಿ ತಲಾಖ್ ರದ್ದುಗೊಳಿಸಿದ್ದೇವೆ. ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರೋದು ಖಚಿತವಾಗಿದೆ. ಕೊಟ್ಟ ಪ್ರಣಾಳಿಕೆಯನ್ನು ಸಹ ಈಡೇರಿಸಲಿದೆ. ಅದನ್ನು ಬಿಟ್ಟು ಕಾಂಗ್ರೆಸ್-ಜೆಡಿಎಸ್ ರೀತಿ ಸುಳ್ಳು ಭರವಸೆ ನೀಡಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಕ್ಷೇತ್ರದ ಉಸ್ತುವಾರಿ ಸುನೀಲ್‍ಯಾದವ್, ಕ್ಷೇತ್ರದ ಪ್ರಭಾರಿ, ಮನ್‍ಮುಲ್ ನಿರ್ದೇಶಕಿ ರೂಪ, ಅಧ್ಯಕ್ಷ ಎಲ್.ಅಶೋಕ್, ಮುಖಂಡ ಕಣಿವೆ ಮಹೇಶ್ ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು