ವರದಿ : ನಿಷ್ಕಲ ಎಸ್., ಮೈಸೂರು
ಮೈಸೂರು : ಸಂಗೀತವು ಮನುಷ್ಯನ ಮನಸ್ಸು ಮತ್ತು ದೇಹದ ಮೇಲೆ ಪ್ರಭಾವ ಬೀರುವ ಅದ್ಭುತ ಶಕ್ತಿಯನ್ನು ಹೊಂದಿದೆ. ಇದು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಿ, ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಖ್ಯಾತ ಮನಃಶಾಸ್ತ್ರಜ್ಞೆ ಡಾ.ರೇಖಾ ಮನಃಶಾಂತಿ ಹೇಳಿದರು.
ಕುವೆಂಪುನಗರದ ಕಫೆನೆಸ್ತಾದಲ್ಲಿ ಖ್ಯಾತ ಮನಃಶಾಸ್ತ್ರಜ್ಞೆ ಡಾ.ರೇಖಾ ಮನಃಶಾಂತಿ ನೇತೃತ್ವದಲ್ಲಿ ಏರ್ಪಡಿಸಿದ್ದ ಮ್ಯೂಸಿಕಲ್ ವೇವ್ಸ್ ಕರೋಕೆ ನೈಟ್ಸ್ ಮತ್ತು ಕಫೆ ನೆಸ್ತಾ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ಸಂಗೀತ ಕೇಳುವುದರಿಂದ ಮತ್ತು ಹಾಡುವುದರಿಂದ ಸಂತೋಷದ ಹಾರ್ಮೋನ್‌ಗಳಾದ ಡೋಪಮೈನ್, ಸೆರೊಟೋನಿನ್ ಮುಂತಾದವುಗಳು ಬಿಡುಗಡೆಯಾಗಿ ಮನಸ್ಥಿತಿ ಹಗುರಾಗುತ್ತದೆ. ಇದು ಸ್ಮರಣಶಕ್ತಿ ಹೆಚ್ಚಿಸಿ, ಆಲ್ಜೈಮರ್‌ನಂತಹ ರೋಗಗಳಲ್ಲಿ ಸಹಾಯ ಮಾಡುತ್ತದೆ. ಸಂಗೀತ ಚಿಕಿತ್ಸೆಯ ಮೂಲಕ ಆತಂಕ ಮತ್ತು ಖಿನ್ನತೆಯನ್ನು ನಿಯಂತ್ರಿಸಬಹುದು.
ಸಂಗೀತವು ಹೃದಯ ಬಡಿತ, ರಕ್ತದೊತ್ತಡವನ್ನು ನಿಯಂತ್ರಿಸಿ, ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ. ವ್ಯಾಯಾಮದ ಸಮಯದಲ್ಲಿ ಶ್ರಮ ಅರಿವನ್ನು ಕಡಿಮೆ ಮಾಡಿ, ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದು ನೋವನ್ನು ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಆಧ್ಯಾತ್ಮಿಕ ಶಕ್ತಿಪುರಾತನ ಋಷಿಗಳು ಸಂಗೀತವನ್ನು "ಗಂಧರ್ವ ವಿದ್ಯೆ" ಎಂದು ಕರೆದು, ಅದರ ಮೂಲಕ ಆಧ್ಯಾತ್ಮಿಕ ಶಾಂತಿ ಪಡೆದಿದ್ದರು. ಇದು ಮನುಷ್ಯನ ಭಾವನೆಗಳನ್ನು ವ್ಯಕ್ತಪಡಿಸಿ, ಜೀವನವನ್ನು ಸಮತೋಲನಗೊಳಿಸುತ್ತದೆ ಎಂದು ಹೇಳಿದರು.
ಇದೇ ವೇಳೆ ಡಾ.ರೇಖಾ ಮನಃಶಾಂತಿ ಮತ್ತಿತರ ಸಾಧಕರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರಪಾಲಿಕೆ ರೆವಿನ್ಯೂ ಡಿಸಿ ಸೋಮಶೇಖರ್ ಜಿ.ಎಸ್., ಜನ ಚೈತನ್ಯ ಫೌಂಡೇಷನ್ ಅಧ್ಯಕ್ಷರಾದ ಲಕ್ಷ್ಮಣ್ ಆರ್., ಗಾಯಕ ಅಮ್ಮ ರಾಮಚಂದ್ರ, ಜಿಪಿಎಸ್ ಫೌಂಡೇಷನ್ ಸಂಸ್ಥಾಪಕರಾದ ಸಂದೇಶ್ ಜಿ.ಪಿ., ಇತರರು ಇದ್ದರು.


