ಪಾಂಡವಪುರದಲ್ಲಿ ರೈತಶಕ್ತಿ ದರ್ಶನ

ಭಾರಿ ಜನಸ್ತೋಮ, ಚಿತ್ರನಟ ದರ್ಶನ್ ಪ್ರಚಾರ, ಗೆಲುವಿನ ಹುರುಪಿನಲ್ಲಿ ರೈತಸಂಘದ ಕಾರ್ಯಕರ್ತರು

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್-ರೈತಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದರ್ಶನ್ ಪುಟ್ಟಣ್ಣಯ್ಯ ಗುರುವಾರ ಪಾಂಡವಪುರದಲ್ಲಿ ತಮ್ಮ ರೈತಶಕ್ತಿ ಪ್ರದರ್ಶಸಿದರು. 
ಹಸಿರು ಶಾಲು ಹೊದ್ದು, ಹಸಿರು ಬಾವುಟ ಹಿಡಿದ ಸಾವಿರಾರು ಕಾರ್ಯಕರ್ತರ ಜತೆ ಮೆರವಣಿಗೆ ಮೂಲಕ ದರ್ಶನ್ ಪುಟ್ಟಣ್ಣಯ್ಯ ಮತ್ತಿತರ ಕಾಂಗ್ರೆಸ್ ಮುಖಂಡರ ಜತೆಗೂಡಿ ತಾಲೂಕು ಕಚೇರಿಗೆ ಆಗಮಿಸಿದರು. ಇದಕ್ಕೂ ಮುನ್ನ ಸಾಹಿತಿ ದೇವನೂರು ಮಹಾದೇವ, ಪ್ರೊ.ಸುಮಿತ್ರಾಬಾಯಿ, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಕೆ.ಬಿ.ನರಸಿಂಹೇಗೌಡ, ಎ.ಎಲ್.ಕೆಂಪೂಗೌಡ ದರ್ಶನ್ ಪರ ನಾಮಪತ್ರ ಸಲ್ಲಿಸಿದರು.
ಈ ವೇಳೆ ಸಾಹಿತಿ ದೇವನೂರು ಮಾತನಾಡಿ, ದರ್ಶನ್ ಪುಟ್ಟಣ್ಣಯ್ಯ ಶಾಸಕರಾಗಿ ಆಯ್ಕೆಯಾದರೆ ಏನು ಮಾಡುತ್ತಾರೆ ಅನ್ನುವುದಕ್ಕಿಂತ, ಏನು ಮಾಡಲ್ಲ ಎಂಬುದು ಮುಖ್ಯವಾಗಿದೆ.
ಅವರು ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಕೆಆರ್‍ಎಸ್ ಅಣೆಕಟ್ಟೆಯ ಭದ್ರತೆಗೆ ಮಾರಕವಾದ ಕಲ್ಲು ಗಣಿಗಾರಿಕೆ (ಸ್ಟೋನ್ ಕ್ರಷರ್)  ಸ್ಥಾಪಿಸುವುದಿಲ್ಲ.ಅಥವಾ ಅದಕ್ಕೆ ಉತ್ತೇಜನ ನೀಡುವುದಿಲ್ಲ, ಬಡವರ ಶಿಕ್ಷಣ ಕಸಿಯುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದಿಲ್ಲ, ಹಾಗೆಯೇ ಯಾವುದೇ ರೀತಿಯ ಗುತ್ತಿಗೆ ಕಾಮಗಾರಿ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅವರ ಮಾತಿನಲ್ಲಿ ಸತ್ಯವಿದೆ ಎಂಬ ಭರವಸೆಯೊಂದಿಗೆ ನಾವು ಪ್ರಚಾರಕ್ಕೆ ಆಗಮಿಸಿದ್ದೇವೆ. ದರ್ಶನ್ ಆದ್ಯತೆಗಳು ಕೇವಲ ರೈತ ಕಲ್ಯಾಣ ಕಾರ್ಯಕ್ರಮಗಳು ಮಾತ್ರ ಇವೆ. ಅವರು ಗೆಲ್ಲಬೇಕು.ಅವರ ಕನಸು ನನಸಾಗಬೇಕು ಎಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಅಮೆರಿಕಾದಲ್ಲಿ ಕೊಟ್ಯಾಂತರ ರೂ. ಸಂಪಾದನೆ ಇರುವ ಉದ್ಯಮಗಳನ್ನು ತ್ಯಜಿಸಿ ದರ್ಶನ್ ಪುಟ್ಟಣ್ಣಯ್ಯ ಕೇವಲ ನಮ್ಮ ರಾಜ್ಯದ ರೈತರ ಹಿತ ಕಾಪಾಡಲು ನಮ್ಮ ಹೋರಾಟದ ನೇತೃತ್ವ ವಹಿಸಲು ಎಲ್ಲವನ್ನೂ ಬಿಟ್ಟು ಬಂದಿದ್ದಾರೆ. ಅದು ಅವರ ದೊಡ್ಡತನ ಈ ಬಾರಿ ರೈತಸಂಘಟನೆಗೆ ಗೆಲುವಾಗಲಿದೆ ಎಂದರು.
ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರು ನಿಧನರಾದ ಬಳಿಕ ವಿಧಾನ ಸಭೆಯಲ್ಲಿ ರೈತರ ಪರವಾಗಿ ದನಿ ಎತ್ತುವವರು ಯಾರೂ ಇಲ್ಲದಂತಾಗಿದೆ. ಈ ಕಾರಣದಿಂದ ದರ್ಶನ್ ಪುಟ್ಟಣ್ಣಯ್ಯ ಅವರು ವಿಧಾನಸಭೆ ಪ್ರವೇಶ ಮಾಡುವುದು ಅನಿವಾರ್ಯವಾಗಿದ್ದು, ಈ ಚುನಾವಣೆಯಲ್ಲಿ ರಾಜ್ಯದ 30 ಜಿಲ್ಲೆಗಳಿಂದ ರೈತ ಮುಖಂಡರು ಆಗಮಿಸಿ ದರ್ಶನ್ ಪರ ಪ್ರಚಾರ ಮಾಡಲಿದ್ದಾರೆ ಎಂದರು.
ಪಟ್ಟಣದ ಕಾಮನ ಚೌಕದಿಂದ ಹೊರಟ ರೈತ ನಾಯಕರ ಮೆರವಣಿಗೆ ತಾಲೂಕು ಕಚೇರಿಗೆ ಆಗಮಿಸಿತು. ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಚಿತ್ರನಟ ದರ್ಶನ್ ಆಗಮಿಸಿ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ನಡೆಸಿದರು.ಈ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದ ಘಟನೆಯೂ ನಡೆಯಿತು. ಸಾಕಷ್ಟು ಪ್ರಮಾಣದಲ್ಲಿ ರೈತ ಮಹಿಳೆಯರೂ ಮೆರವಣಿಗೆಯಲ್ಲಿ ಭಾಗವಹಿಸಿದ್ದುದು ವಿಶೇಷವಾಗಿತ್ತು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಎಚ್.ತ್ಯಾಗರಾಜು, ಡಾ.ರವೀಂದ್ರ, ಬಿ.ರೇವಣ್ಣ, ಹೊನಗಾನಹಳ್ಳಿ ಕೃಷ್ಣೇಗೌಡ ಮುಂತಾದವರು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಆಗಮಿಸಿದರು.
ಭಾರಿ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದುದು ಸಹ ಮೆರವಣೆಗೆ ಯಶಸ್ವಿಯಾಗಲು ಕಾರಣವಾಯಿತು.
ವರಿಷ್ಠ ನಾಯಕಿ ಸುನೀತ ಪುಟ್ಟಣ್ಣಯ್ಯ, ರೈತ ಮುಖಂಡರಾದ ಚಿಕ್ಕಾಡೆ ಹರೀಶ್, ಕೆನ್ನಾಳು ನಾಗರಾಜು, ವಿಜಯ ಕುಮಾರ್, ಎಣ್ಣೆಹೊಳೆಕೊಪ್ಪಲು ಪುರುಷೋತ್ತಮ್, ಮಂಜುನಾಥ್, ಬಿಟಿ ಮಂಜುನಾಥ್ ಮುಂತಾದವರು ಇದ್ದರು. 
ಪಟ್ಟಣದಲ್ಲಿ ಭಾರಿ ಪ್ರಮಾಣದಲ್ಲಿ ಜನರು ಆಗಮಿಸಿದ್ದ ಕಾರಣ ಸುಮಾರು ಐದಾರು ಗಂಟೆಗೂ ಹೆಚ್ಚು ಕಾಲ ಬೀದರ್-ಚಾಮರಾಜನಗರ ರಾಷ್ಟ್ರೀಯ ಹೆದ್ದಾಗಿಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು