ಮೀನುಗಾರನ ಗುಂಡಿಕ್ಕಿ ಹತ್ಯೆ : ಕರ್ನಾಟಕ ಅರಣ್ಯಾಧಿಕಾರಿಗಳ ವಿರುದ್ಧ ಗಂಭೀರ ಆರೋಪ; ಕೆಲ ಕಾಲ ವಾಹನ ಸಂಚಾರ ಸ್ಥಗಿತ

 

ಶಾರುಕ್ ಖಾನ್, ಹನೂರು
ಹನೂರು : ತಮಿಳುನಾಡು-ಕರ್ನಾಟಕ ಗಡಿಭಾಗದ ಅಡಿಲಾರ್ ಪ್ರದೇಶದಲ್ಲಿ ಫೆ, 14ರ ರಾತ್ರಿ ಮೀನು ಹಿಡಿಯುತ್ತಿದ್ದ ಮೂವರು ಮೀನುಗಾರರ ಮೇಲೆ ಕರ್ನಾಟಕ ಅರಣ್ಯ ಇಲಾಖೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಒಬ್ಬ ಮೀನುಗಾರ ಸತ್ತಿರುವುದಾಗಿ ಆರೋಫಿಸಿ ತಮಿಳುನಾಡಿನ ನೂರಾರು ಜನರು ಪಾಲಾರ್ ಚೆಕ್‍ಪೋಸ್ಟ್ ಬಳಿ ಜಮಾಯಿಸಿ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರಲ್ಲದೇ ಕೆಲ ಕಾಲ ತಮಿಳುನಾಡು-ಕರ್ನಾಟಕ ವಾಹನ ಸಂಚಾರ ಸ್ಥಗಿತಗೊಳಿಸಿದರು.
ಸೇಲಂ ಜಿಲ್ಲೆಯ ಕೊಳತ್ತೂರು ಕರೈಕಾಡು ನಿವಾಸಿ ರಾಜಾ ಮೃತಪಟ್ಟವರಾಗಿದ್ದು, ಈತನ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.
ಸೇಲಂ ಜಿಲ್ಲೆಯ ಕೊಳತ್ತೂರಿನ ಕರೈಕಾಡುವಿನ ರಾಜಾ ಸೇರಿದಂತೆ 3 ಮೀನುಗಾರರು ಮೀನು ಹಿಡಿಯಲು ತಮಿಳುನಾಡು-ಕರ್ನಾಟಕ ಗಡಿಭಾಗದ ಅಡಿಲಾರ್ ಪ್ರದೇಶಕ್ಕೆ ತೆರಳಿದ್ದರು. 14ರ ರಾತ್ರಿ ಮೀನು ಹಿಡಿಯುತ್ತಿದ್ದಾಗ ಕರ್ನಾಟಕ ಅರಣ್ಯ ಇಲಾಖೆ ಗುಂಡಿನ ದಾಳಿ ನಡೆಸಿತ್ತು. ಈ ಗುಂಡಿನ ದಾಳಿಯಲ್ಲಿ ಮೀನುಗಾರ ರಾಜಾ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. 
ಕರ್ನಾಟಕ ತಮಿಳುನಾಡು ಗಡಿಯಲ್ಲಿ ವಾಸಿಸುವ ಮೀನುಗಾರರು ಎರಡು ರಾಜ್ಯಗಳ ನೀರನ್ನು ತಮ್ಮ ಜೀವನೋಪಾಯಕ್ಕೆ ಬಳಸುತ್ತಾರೆ. ಇದು ಜೀವನ ವಿಧಾನವಲ್ಲದೇ ಬೇರೇನೂ ಅಲ್ಲ ಮತ್ತು ಅಪರಾಧವಲ್ಲ. ಕರ್ನಾಟಕ ಭಾರತದ ಭಾಗವೇ ಹೊರತು ಪಾಕಿಸ್ತಾನವಲ್ಲ. ಎರಡು ರಾಜ್ಯಗಳ ಗಡಿ ನೀರಿನಲ್ಲಿ ಹಿಡಿದ ಮೀನುಗಾರರನ್ನು ಬಂಧಿಸಬಹುದಾಗಿತ್ತು. ಆದರೇ, ಅಮಾನವೀಯವಾಗಿ ಹತ್ಯೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.
2018ರಲ್ಲೂ ಇದೇ ಪ್ರದೇಶದಲ್ಲಿ ತಮಿಳುನಾಡಿನ ಮೀನುಗಾರ ಪಳನಿ ಅವರನ್ನು ಅರಣ್ಯ ಇಲಾಖೆ ಗುಂಡಿಕ್ಕಿ ಹತ್ಯೆ ಮಾಡಿತ್ತು. ಕರ್ನಾಟಕದ ಗಡಿಯಲ್ಲಿ ಈ ಭಾಗದ ಜನರು ಪ್ರತಿಭಟನೆ ನಡೆಸಿದರು. ಇದೇ ರೀತಿಯ ಉದ್ವಿಗ್ನತೆಯ ಭೀತಿಯಿಂದ ಎರಡು ರಾಜ್ಯಗಳ ನಡುವಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. 
ಮೀನುಗಾರರ ಮೇಲಿನ ಗುಂಡಿನ ದಾಳಿಯ ದಿಕ್ಕು ತಪ್ಪಿಸಲು ಕರ್ನಾಟಕ ಅರಣ್ಯಾಧಿಕಾರಿಗಳು ತಮ್ಮ ಮೇ ಲೆ ದಾಳಿ ನಡೆಸಿದ ಜಿಂಕೆ ಬೇಟೆಗಾರರನ್ನು ಅಟ್ಟಿಸಿರುವುದಾಗಿ ಕತೆ ಕಟ್ಟಿ ಹೇಳಿದ್ದಾರೆಂದು ಪ್ರತಿಭಟನಾಕಾರರು ಆರೋ ಪಿಸಿದರು. ಮೃತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಮತ್ತು ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಸಹ ಒತ್ತಾಯಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು