ನಾಳೆ ಮೈಸೂರು ನ್ಯಾಯಾಲಯಕ್ಕೆ ಹಾಜರು ಸಾಧ್ಯತೆ: ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ
ಮೈಸೂರು: ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿ, ಇತ್ತೀಚೆಗೆ ದಲಿತ ಮಹಿಳೆಯ ಮೇಲೆ ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ರಾಜ್ಯಾದ್ಯಂತ ಸುದ್ದಿಯಲ್ಲಿದ್ದ ಸ್ಯಾಂಟ್ರೊ ರವಿ ಅಲಿಯಾಸ್ ಕೆ.ಎಸ್.ಮಂಜುನಾಥ್ ನನ್ನು ಕೊನೆಗೂ ಮೈಸೂರು ಪೊಲೀಸರು ಇಂದು ಬೆಳಿಗ್ಗೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ಬಂಧಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಕಿಕ್ಕಿರಿದ ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದ ಸ್ಯಾಂಟ್ರೊ ರವಿ ಅಲಿಯಾಸ್ ಮಂಜುನಾಥ್ ಕೆ.ಎಸ್. ಎಂಬ ಕ್ರಿಮಿನಲ್‍ನನ್ನು ನಮ್ಮ ವಿಶೇಷ ಪೊಲೀಸರ ತಂಡ ಬಂಧಿಸಿದೆ ಎಂದು ಮಾಹಿತಿ ನೀಡಿದರು.
ಸ್ಯಾಂಟ್ರೋ ರವಿ ಜತೆ ಮೈಸೂರಿನ ಶೃತೇಶ್, ಗುಜರಾತ್ ಮೂಲದ ಕೊಚ್ಚಿಯ ನಿವಾಸಿ ರಾಮ್‍ಜಿ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಈ ಮೊದಲು ಸ್ಯಾಂಟ್ರೊ ರವಿಯೊಂದಿಗೆ ಸಂಪರ್ಕದಲ್ಲಿದ್ದ ಮಧುಸೂದನ್ ಎಂಬಾತನನ್ನು ಸಹ ಬಂದಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.
ಸ್ಯಾಂಟ್ರೊ ರವಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಜ.2 ರಂದು ಪ್ರಕರಣ ದಾಖಲಾಗಿತ್ತು. ಇದರ ನಂತರ ಈತ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪ ಕೂಡ ಕೇಳಿ ಬಂದು ಸರ್ಕಾರಕ್ಕೆ ಕೆಟ್ಟ ಹೆಸರು ಬರಲು ಪ್ರಾರಂಭವಾಗುತ್ತಿದ್ದಂತೆ, ನಾಲ್ಕು ವಿಶೇಷ ಪೊಲೀಸ್ ತಂಡವನ್ನು ರಚನೆ ಮಾಡಿ ಈತನ ಪತ್ತೆಗೆ ಬಲೆ ಬೀಸಲಾಯಿತು.
ಆದರೆ, ಈತ ಮೊದಲೇ ಕ್ರಿಮಿನಲ್ ಆಗಿರುವುದರಿಂದ ಚಾಲಾಕಿತನದಿಂದ ವಾಹನ ಬದಲಾಯಿಸುವುದು, ಮೊಬೈಲ್ ಸಿಮ್ ಬದಲಾಯಿಸಿ, ವೇಷ ಮರೆಸಿ ತಪ್ಪಿಸಿಕೊಳ್ಳುತ್ತಿದ್ದ, ಆಂಧ್ರ, ತಮಿಳುನಾಡು, ಕೇರಳ, ತೆಲಂಗಾಣ ರಾಜ್ಯಗಳಲ್ಲಿ ಸಂಚರಿಸಿ, ದಿನಕ್ಕೊಂದು ಕಾರು, ಮೊಬೈಲ್, ಊರುಗಳನ್ನು ಬದಲಾಯಿಸುತ್ತಿದ್ದ. ಆದರೂ ನಮ್ಮ ಪೊಲೀಸರು ಈತನ ಬೆನ್ನು ಹತ್ತಿ ಬಂಧಿಸಿದ್ದಾರೆ ಎಂದು ತಿಳಿಸಿದರು.
ಸ್ಯಾಂಟ್ರೊ ರವಿ ತನ್ನ ತಲೆಗೆ ಹಾಕಿದ್ದ ವಿಗ್ ತೆಗೆದು ಮೀಸೆ ಬೋಳಿಸಿಕೊಂಡು ಯಾರಿಗೂ ಅನುಮಾನ ಬರದಂತೆ ಕಳೆದ ಹತ್ತು ದಿನಗಳಿಂದ ತಲೆ ಮರೆಸಿಕೊಂಡಿದ್ದ ಎಂದು ಹೇಳಿದರು.
2002 ರಲ್ಲಿ ಈತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿ 11 ತಿಂಗಳು ಜೈಲು ವಾಸ ಅನುಭವಿಸಿದ್ದ. ಈತನ ಮೇಲೆ ಗೂಂಡಾ ಕಾಯ್ದೆ ಕೂಡ ದಾಖಲಾಗಿತ್ತು. ಸ್ಯಾಂಟ್ರೊ ರವಿಯನ್ನು ಇಂದು ಗುಜರಾತ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನಾಳೆ ಮೈಸೂರು ನ್ಯಾಯಾಲಯಕ್ಕೆ ಕರೆದುಕೊಂಡು ಬರುವ ಸಾಧ್ಯತೆ ಇದೆ. ನಂತರ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.
ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ನೇತೃತ್ವದಲ್ಲಿ ರಾಯಚೂರು ಎಸ್ಪಿ ನಿಖಿಲ್, ಬಿ, ಮಂಡ್ಯ ಎಸ್ಪಿ ಯತೀಶ್ ಎನ್, ರಾಮನಗರ ಎಸ್ಪಿ ಡಾ.ಸಂತೋμï ಬಾಬು, ಡಿಸಿಪಿಗಳಾದ ಮುತ್ತುರಾಜ್, ಗೀತಾ ಪ್ರಸನ್ನ, ಎಸಿಪಿ ಶಿವಶಂಖರ್, ಇನ್ಸ್‍ಪೆಕ್ಟರ್ ಅಝರುದ್ದೀನ್ ಸೇರಿದಂತೆ 19 ಜನರ ತಂಡ ರಚಿಸಿ ಸ್ಯಾಂಟ್ರೋ ರವಿ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿತ್ತು ಎಂದರು.
ಗೃಹ ಸಚಿವರ ಗುಜರಾತ್ ಭೇಟಿ:
ಸ್ಯಾಂಟ್ರೊ ರವಿ ಬಂಧನದ ಬೆನ್ನಲ್ಲೆ ಗೃಹ ಸಚಿವ ಅರಗಂ ಜ್ಞಾನೇಂದ್ರ ಕೂಡ ಗುಜರಾತ್‍ಗೆ ಭೇಟಿ ನೀಡಿದ್ದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎಡಿಜಿಪಿ ಅಲೋಕ್ ಕುಮಾರ್, ಗೃಹ ಸಚಿವರ ಗುಜರಾತ್ ಭೇಟಿಗೂ ಸ್ಯಾಂಟ್ರೊ ರವಿ ಬಂಧನಕ್ಕೂ ಯಾವುದೇ ಸಂಬಂಧ ಇಲ್ಲ ಗೃಹ ಸಚಿವರು ಫೋರೆನಿಕ್ಸ್ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಜ.12 ರ ಗುರುವಾರ ತೆರಳಿ ಸಂಜೆ ಗುಜರಾತ್ ನಿಂದ ವಾಪಸ್ ಆಗಿದ್ದಾರೆ. ಸ್ಯಾಂಟ್ರೊ ರವಿ ಜ.13 ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಗುಜರಾತ್ ಗೆ ಎಂಟ್ರಿಯಾಗಿದ್ದಾನೆ. ಹಾಗಾಗಿ ಈ ವಿಚಾರವನ್ನು ತಳುಕುಹಾಕುವ ಅಗತ್ಯವಿಲ್ಲ ಎಂದು ಎಂದು ಸ್ಪಷ್ಟಪಡಿಸಿದರು.
0 ಕಾಮೆಂಟ್‌ಗಳು