ಮೋದಿ, ಶಾ ಇಬ್ಬರೂ ದೇಶವನ್ನು ೨೫ ವರ್ಷ ಹಿಂದಕ್ಕೆ ಕೊಂಡೊಯ್ದಿದ್ದಾರೆ

ಬಿಜೆಪಿ ಒಂದು ನಾಟಕದ ಕಂಪನಿ ಎಂದು ಟೀಕಿಸಿದ ಎಂ.ಲಕ್ಷ್ಮಣ್‌‌ 

ಮೈಸೂರು: ಬಿಜೆಪಿ ಎಂಬ ನಾಟಕ ಕಂಪನಿಗೆ ನರೇಂದ್ರ ಮೋದಿ ಹಾರ್ಮೋನಿಯಂ ಮಾಸ್ಟರ್‌ ಹಾಗೂ ಅಮಿತ್‌ ಶಾ ತಬಲಾ ಮಾಸ್ಟರ್‌ ಎಂದು ವ್ಯಂಗ್ಯವಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಇಬ್ಬರೂ ನಾಯಕರು ದೇಶವನ್ನು ೨೫ ವರ್ಷ ಹಿಂದಕ್ಕೆ ಕೊಂಡೊಯ್ದಿದ್ದಾರೆ ಎಂದು ಟೀಕಿಸಿದರು.   
ನಗರದ ಕಾಂಗ್ರೆಸ್‌ ಕಛೇರಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು ಬಿಜೆಪಿಯ ಈ ಇಬ್ಬರು ನಾಯಕರು ನಮ್ಮ ದೇಶವನ್ನು ೨೫ ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯವರು ಒಕ್ಕಲಿಗ ಮತ್ತು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಹೇಳಿಕೊಂಡು ಜನರ ಮೂಗಿಗೆ ತುಪ್ಪ ಸವರುತ್ತಿದ್ದಾರೆ. ವಾಸ್ತವವಾಗಿ ಬಿಜೆಪಿಯವರು ಮೀಸಲಾತಿಯ ವಿರೋಧಿಗಳು. ಆದರೆ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ದೇಶದಲ್ಲಿ ಮೀಸಲಾತಿ ತಂದಿದ್ದು ಕಾಂಗ್ರೆಸ್‌ ಎಂದು ಅವರು ಹೇಳಿದರು.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ೫೬ ಸ್ಥಾನಗಳ ಪೈಕಿ ೩೫ನ್ನು ಗೆಲ್ಲಬೇಕು ಎಂದು ಅಮಿತ್‌ ಶಾ ಟಾರ್ಗೆಟ್‌ ಕೊಟ್ಟು ಹೋಗಿದ್ದಾರೆ. ಇವರ ಏನೇ ಪ್ರಯತ್ನ ಮಾಡಿದರೂ ಅದು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ರಂಗಾಯಣದಲ್ಲಿ ಪ್ರದರ್ಶಿಸಲ್ಪಟ್ಟ ಸಾಂಬಶಿವ ಪ್ರಹಸನ ಎಂಬ ನಾಟಕದಲ್ಲಿ ಕಾಂಗ್ರೆಸ್‌ ನಾಯಕರಾದ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರನ್ನು ಅವಹೇಳನಕಾರಿಯಾಗಿ ಬಿಂಬಿಸಿರುವುದನ್ನು ವಿರೋಧಿಸಿ ಶೀಘ್ರದಲ್ಲೇ ಬೃಹತ್‌  ಪ್ರತಿಭಟನೆ  ಹಮ್ಮಿಕೊಳ್ಳಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಮಾತ್ರವಲ್ಲದೆ ಜಾತ್ಯತೀತವಾಗಿ ಎಲ್ಲರೂ ಭಾಗವಹಿಸಲಿದ್ದಾರೆ ಎಂದು ಲಕ್ಷ್ಮಣ್‌ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಬಿ.ಎಂ.ರಾಮು, ಎಂ.ಶಿವಣ್ಣ, ಈಶ್ವರ ಚಕ್ಕಡಿ, ತಿವಾರಿ, ಗಿರೀಶ್‌  ಇದ್ದರು.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು