ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ

ಕೋಲಾರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುವ ಕ್ಷೇತ್ರಗಳ ಬಗ್ಗೆ ಎದ್ದಿದ್ದ ಊಹಾಪೂಹಗಳಗೆ ತೆರೆ ಎಳೆಯಲಾಗಿದ್ದು, ಕೋಲಾರದಿಂದಲೇ ಸ್ಪರ್ಧೆ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಬೂಸ್ಟ್‌ ಸಿಗಲಿದೆ ಎಂಬ ಲೆಕ್ಕಾಚಾರವಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಹಾಗೂ ಮುಖಂಡರು ನಿರಂತರ ಒತ್ತಡ ಹಾಕಿದ್ದರು. ಆದರೆ, ಪಕ್ಷದೊಳಗೆ ಮತ್ತು ಹೊರಗಿನ ಶತ್ರುಗಳ ತಂತ್ರಗಾರಿಕೆ ನಡುವೆ ಕೋಲಾರದಿಂದ ಸ್ಪರ್ಧಿಸುವುದು ರಿಸ್ಕ್‌, ಬೇಡ ಎಂದು ಆಪ್ತ ವಲಯ ಎಚ್ಚರಿಸುತ್ತಲೇ ಇತ್ತು. ಸುಸೂತ್ರ ಗೆಲುವಿನ ದೃಷ್ಟಿಯಿಂದ ವರುಣದಿಂದಲೇ ಸ್ಪರ್ಧೆ ಮಾಡುವಂತೆ ಪುತ್ರ ಯತೀಂದ್ರ ಕೂಡ ಸಲಹೆ ನೀಡಿದ್ದರು.
2023 ಚುನಾವಣೆ ಅವರ ಪಾಲಿಗೆ ಬಹುತೇಕ ಕೊನೆ ಚುನಾವಣೆ. ಕೊನೆಯ ಅವಕಾಶಕ್ಕಾಗಿ ಪುತ್ರ ಯತೀಂದ್ರ ಭವಿಷ್ಯದ ಅವಕಾಶಗಳಿಗೆ ತೊಡಕಾಗಬೇಡಿ ಎಂಬ ಕುಟುಂಬದ ಆಗ್ರಹಕ್ಕೆ ಮಣಿದು, ತಮ್ಮ ಪಾಲಿಗೆ ಸುರಕ್ಷಿತ ಎಂದು ಭಾವಿಸಿದ್ದ ವರುಣದಿಂದ ಸ್ಪರ್ಧಿಸುವ ಚಿಂತನೆ ಕೈಬಿಟ್ಟಿದ್ದಾರೆ. ಬೆಂಬಲಿಗರ ಒತ್ತಾಸೆಯಂತೆ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಜತೆಗೆ, ಬಾದಾಮಿ ಕ್ಷೇತ್ರದಿಂದಲೂ ಅಭ್ಯರ್ಥಿಯಾಗಲು ಬಯಸಿದ್ದಾರೆ. ಆದರೆ, ಎರಡು ಕಡೆ ಸ್ಪರ್ಧೆಗೆ ಹೈಕಮಾಂಡ್‌ ಒಪ್ಪುತ್ತಾ ಎಂಬುದು ಕುತೂಹಲ
.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು