ನರಭಕ್ಷಕ ಚಿರತೆಗೆ ಕಂಡಲ್ಲಿ ಗುಂಡಿಕ್ಕಲು ಆದೇಶ : ಸಾವು ಮರುಕಳಿಸಿದರೆ ಅರಣ್ಯಾಧಿಕಾರಿ ತಲೆದಂಡ :ಸಚಿವ ಸೋಮಶೇಖರ್
ಜನವರಿ 24, 2023
ತಿ.ನರಸೀಪುರ : ನಾಲ್ಕು ಜನರ ಸಾವಿಗೆ ಕಾರಣವಾಗಿರುವ ನರಭಕ್ಷಕ ಚಿರತೆಗಳನ್ನು ಕಂಡಲ್ಲಿ ಗುಂಡಿಕ್ಕಲು ಮೈಸೂರು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಚಿರತೆ ದಾಳಿಯಿಂದ ಸಾವು ಮರುಕಳಿಸಿದರೆ ಹಿರಿಯ ಅರಣ್ಯಾಧಿಕಾರಿಗಳ ತಲೆದಂಡ ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಮೃತಪಟ್ಟ 11 ವರ್ಷದ ಬಾಲಕ ಜಯಂತ್ ನಿವಾಸ ಹಾಗೂ ಕನ್ನನಾಯಕನಹಳ್ಳಿ ಗ್ರಾಮದಲ್ಲಿ ಮೃತಪಟ್ಟ ಸಿದ್ದಮ್ಮ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಚಿರತೆ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು, ಜಿಲ್ಲಾಡಳಿತದೊಂದಿಗೆ ಸಭೆ ಕರೆಯಲಾಗಿದೆ. ಕಬ್ಬು ಕಟಾವು, ರಸ್ತೆ ಬದಿಯ ಮರದ ರೆಂಬೆ ಕಟಾವು, ಗ್ರಾಮಕ್ಕೆ ಬಸ್ ಸೌಕರ್ಯ, ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸುವುದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದರ ಕುರಿತು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತರಲಿದ್ದಾರೆ. ಮುಖ್ಯಮಂತ್ರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕಠಿಣ ನಿರ್ಧಾರ ಕೈಗೊಳ್ಳಲಿದ್ದಾರೆ. ಮತ್ತೆ ಈ ರೀತಿಯ ಅನಾಹುತ ಮರುಕಳಿಸದಂತೆ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುವುದು ಎಂದರು. ಮೃತರ ಕುಟುಂಬ ಸದಸ್ಯರಿಗೆ ಪರಿಹಾರ ಕಲ್ಪಿಸಲಾಗಿದೆ. ಶಾಸಕರಾದ ಎಂ.ಅಶ್ವಿನ್ ಕುಮಾರ್, ಎಸ್‍ಪಿ ಸೀಮಾ ಲಾಟ್ಕರ್ ಸೇರಿದಂತೆ ಅನೇಕ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.