ಫೆ.16ಕ್ಕೆ ರೈತಸಂಘದಿಂದ ಬೆಂಗಳೂರು ಚಲೋ : ರೈತ ವಿರೋಧಿ ಮಸೂದೆ ಹಿಂಪಡೆಯಲು ಒತ್ತಾಯ
ಜನವರಿ 28, 2023
ಮೈಸೂರು; ಕೇಂದ್ರ ಸರ್ಕಾರ ಹಿಂಪಡೆದಿರುವ ಮೂರು ರೈತ ವಿರೋಧಿ ಮಸೂದೆಗಳನ್ನು ರಾಜ್ಯ ಸರ್ಕಾರ ಮುಂದುವರಿಸುತ್ತಿರುವುದನ್ನು ಖಂಡಿಸಿ ಫೆ.16 ರಂದು ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜನರ ಪರಿಸ್ಥಿಯನ್ನು ಅಧೋಗತಿಗೆ ಕೊಂಡೊಯ್ದಿದೆ. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತರ ವಶದಲ್ಲಿದ್ದ ಭೂಮಿಯನ್ನು ಕಪ್ಪು ಹಣದವರ ಪಾಲು ಮಾಡಿ ರೈತರ ಬದುಕನ್ನು ಕಿತ್ತುಕೊಂಡಿದೆ. ಎಪಿಎಂಸಿ ಕಾಯ್ದೆಗೂ ತಿದ್ದುಪಡಿ ತಂದು ಕೃಷಿ ಉತ್ಪನ್ನಗಳ ಮಾರುಕಟ್ಟೆಗಳನ್ನು ಮುಚ್ಚುವ ಸ್ಥಿತಿಗೆ ದೂಡಿದೆ. ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ ಜಾರಿ ಮಾಡಿ ಹೈನುಗಾರಿಕೆಗೆ ದೊಡ್ಡ ಹೊಡೆತ ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತರಪಡಿಸಿದರು. ಹತ್ತಿ, ಕೊಬ್ಬರಿ, ತೆಂಗು, ಅಡಿಕೆ, ತೊಗರಿ ಬೆಳೆಗಳ ಬೆಲೆ ಕುಸಿದು ರೈತರು ಕಂಗಾಲಾಗಿದ್ದಾರೆ. ಕಬ್ಬು ಬೆಳೆಗಾರರು ಕಳೆದ 8 ತಿಂಗಳಿನಿಂದಲೂ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಆದರೆ, ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಪ್ರಧಾನ ಮಂತ್ರಿ ಫಲಸು ಭೀಮಾ ಯೋಜನೆ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಿಲ್ಲ. ಫಸಲು ಆಧಾರಿತ ಪಹಣಿ ಬೆಲೆ ನಿರ್ಧರಿಸಿ ರೈತರ ಜೇಬಿಗೆ ಕನ್ನ ಹಾಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತಾಪಿಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿ ಆಡಳಿತ ನಡೆಸುತ್ತಿವೆ ಎಂದು ಕಿಡಿ ಕಾರಿದರು. ರೈತ ಸಮುದಾಯವಲ್ಲದೇ ದಲಿತರ ಹಕ್ಕುಗಳನ್ನು ಒಂದೋಂದಾಗಿ ದಮನ ಮಾಡಲಾಗುತ್ತಿದೆ. ಜತೆಗೆ ಕಾರ್ಮಿಕರ ಬದುಕನ್ನೂ ಕಿತ್ತುಕೊಂಡಿದೆ. ಉದ್ಯೋಗ ನೀಡದೆ ಯುವ ಜನತೆಗೆ ಮೋಸ ಮಾಡಿದೆ. ಮಹಿಳೆಯರ ಬದುಕಿಗೂ ಸ್ಪಂದಿಸುತ್ತಿಲ್ಲ. ವಿದ್ಯಾರ್ಥಿಗಳಿಗೆ ಭರವಸೆ ಇಲ್ಲದಂತಾಗಿದೆ. ಹಾಗಾಗಿ ರಾಜ್ಯದ ದುಡಿಯುವ ಜನರ ಭಾವನೆಗಳನ್ನು ನಿವಾರಿಸಲು ಆಗ್ರಹಿಸಿ ಫೆಬ್ರವರಿ 16 ರಂದು ಬೆಂಗಳೂರು ಚಲೋ ನಡೆಸಿ ಫ್ರ ಈಡಂ ಪಾರ್ಕ್‍ನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು. ಈ ರ್ಯಾಲಿಯಲ್ಲಿ ರೈತ, ದಲಿತ, ಕಾರ್ಮಿಕ, ಮಹಿಳಾ ವಿದ್ಯಾರ್ಥಿ, ಯುವಜನತೆ, ಆದಿವಾಸಿಗಳೊಟ್ಟಿಗೆ ಚಳವಳಿ ನಡೆಸಲಾಗುವುದು ಎಂದರು. ಫೆ,13 ರಂದು ಎಂಡಿಎನ್ ನೆನಪು: ರೈತರಿಗೆ ದ್ವನಿ ತಂದುಕೊಟ್ಟ ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆಯನ್ನು ಫೆ.13 ರಂದು ಚಾಮರಾಜನಗರದಲ್ಲಿ ಕರ್ನಾಟಕ ರಾಜ್ಯ ರೈತಸಂಗದ ವತಿಯಿಂದ ಆಯೋಜಿಸಲಾಗಿದೆ. ಅಂದು ಚಾಮರಾಜನಗರದ ಪ್ರಮುಖ ವೃತ್ತಕ್ಕೆ ಅವರ ಹೆಸರು ಇಡಲಾಗುವುದು. ನಂತರ ಯುವ ರೈತ ರಾಜ್ಯ ಘಟಕಕ್ಕೆ ಚಾಲನೆ ನೀಡಲಾಗುವುದು. ಪ್ರತಿ ಜಿಲ್ಲೆಯಲ್ಲೂ ತಲಾ 100 ಜನ ಯುವಕರನ್ನು ಆಯ್ಕೆ ಮಾಡಿ ಹೋರಾಟಕ್ಕೆ ಸಜ್ಜು ಮಾಡುತ್ತಿದ್ದು, ಅಂದು ರಾಜ್ಯ ಯುವ ರೈತ ಘಟಕಕ್ಕೆ ಚಾಲನೆ ನೀಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಸಿರುಮಳ್ಳಿ ಸಿದ್ದಪ್ಪ, ಹೆಜ್ಜಿಗೆ ಪ್ರಕಾಶ್, ಪ್ರಭಾಕರ್, ಚಂದ್ರು ಸೇರಿದಂತೆ ಹಲವರು ಇದ್ದರು.
0 ಕಾಮೆಂಟ್‌ಗಳು