ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು: ಗಂಡನ ಸ್ಥಿತಿ ಗಂಭೀರ ಕೊಲೆ ಶಂಕೆ

ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ

ಪಾಂಡವಪುರ: ತಾಲ್ಲೂಕಿನ ನಳ್ಳೇನಹಳ್ಳಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ಅಪಘಾತದಿಂದ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.
33 ವರ್ಷ ಕನ್ನಿಕಾ (ಲಕ್ಷ್ಮಿ) ಮೃತಪಟ್ಟ ಮಹಿಳೆಯಾಗಿದ್ದು, ತೀವ್ರವಾಗಿ ಗಾಯಗೊಂಡು ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈಕೆಯ ಪತಿ ವೆಂಕಟೇಶ್ ಸ್ಥಿತಿ ಗಂಭೀರವಾಗಿದೆ.
ಶುಕ್ರವಾರ ರಾತ್ರಿ ವೆಂಕಟೇಶ್ ಮತ್ತು ಕನ್ನಿಕಾ ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಇವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಕನ್ನಿಕಾ ಮೃತಪಟ್ಟರು.
ಮೃತ ಕನ್ನಿಕಾ ಮತ್ತು ಪತಿ ವೆಂಕಟೇಶ್ ಗ್ರಾಮದ ಬಳಿ ಡಾಬಾ ನಡೆಸುತ್ತಿದ್ದರು. ಜತೆಗೆ ಅಕ್ರಮ ಮದ್ಯ ಮಾರಾಟವೂ ನಡೆದಿತ್ತು. ಇವರ ಡಾಬಾ ಎದುರು ಕನ್ನಿಕಾ ಸಹೋದರ ಸಂಬಂಧಿ ಉಮೇಶ್ ಎಂಬವರೂ ಸಹ ಡಾಬಾ ನಡೆಸುತ್ತಿದ್ದು, ಇಬ್ಬರಲ್ಲೂ ವೃತ್ತಿ ವೈಷಮ್ಯ ಇತ್ತು ಎನ್ನಲಾಗಿದೆ. 
ಮೃತ ಕನ್ನಿಕಾ ನಡೆಸುತ್ತಿದ್ದ ಡಾಬಾ ಹಿಂದೆ ಇದೇ ಗ್ರಾಮದ ಅಭಿಷೇಕ್ ಎಂಬ ಯುವಕ ನಡೆಸುತ್ತಿದ್ದ, ಕೆಲ ದಿನಗಳ ಹಿಂದೆ ಕೆ.ಆರ್.ಪೇಟೆಯಲ್ಲಿ ಅಭಿಶೇಕ್ ಕೊಲೆಯಾಗಿತ್ತು. ಆನಂತರ ಈ ಡಾಬಾ ಕನ್ನಿಕಾ ನಡೆಸುತ್ತಿದ್ದರು.
ಉಮೇಶ್ ಮತ್ತು ಕನ್ನಿಕಾ ಸಹೋದರ ಸಂಬಂಧಿಗಳಾದರೂ ಪರಸ್ಪರ ವೈಷಮ್ಯ ಇತ್ತು ಎನ್ನಲಾಗಿದೆ. ಇದರಿಂದ ಉಮೇಶ್ ಎಂಬಾತನೇ ಅಪರಿಚಿತ ವಾಹನದಿಂದ ಕನ್ನಿಕಾ ಮತ್ತು ವೆಂಕಟೇಶ್ ಬೈಕ್‍ಗೆ ಡಿಕ್ಕಿ ಹೊಡೆದು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದಾರೆ ಎಂದು ಗ್ರಾಮಸ್ಥರು ಹಾಗೂ ಮೃತರ ಸಂಬಂಧಿಗಳು ಆರೋಪಿಸಿ ಇಂದು ಮೃತದೇಹ ಗ್ರಾಮಕ್ಕೆ ಬರುತ್ತಿದ್ದಂತೆ ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು, ಸ್ಥಳಕ್ಕೆ ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಪೊಲೀಸರ ಮೂಲಕ ತನಿಖೆ ನಡೆಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದು ಮೃತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. 



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು