ಕಬ್ಬಿನ ದರ ಏರಿಸಲು ಸರ್ಕಾರಕ್ಕೆ 23ರ ತನಕ ಗಡುವು: ನಿರ್ಲಕ್ಷ್ಯ ಮಾಡಿದರೆ 26ಕ್ಕೆ ಬೆಳಗಾವಿ ಸುವರ್ಣಸೌಧ ಮುತ್ತಿಗೆ; ಕುರುಬೂರು ಶಾಂತಕುಮಾರ್ ಎಚ್ಚರಿಕೆ

ಬೆಂಗಳೂರು : ರಾಜ್ಯ ಸರ್ಕಾರ ಕಬ್ಬಿನ ಎಫ್‍ಆರ್‍ಪಿ ದರವನ್ನು ಡಿ.23 ರೊಳಗೆ ಏರಿಕೆ ಮಾಡದಿದ್ದರೆ. ಡಿ.26 ರಂದು ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ 27ನೇ ದಿನದ ಅಹೋರಾತ್ರಿ ಧರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಬ್ಬಿನ ಕಟಾವು ಕೂಲಿ, ಸಾಗಾಣಿಕೆ ವೆಚ್ಚ ಕಡಿಮೆಮಾಡಲು ಮುಖ್ಯಮಂತ್ರಿ ಅವರು ಒಪ್ಪಿಕೊಂಡಿದ್ದಾರೆ. ಅದರಂತೆ ಡಿ.23 ರಂದು ವಿಶ್ವ ರೈತ ದಿನದ ಆಚರಣೆಯ ಒಳಗೆ ಕಬ್ಬು ಎಫ್‍ಆರ್‍ಪಿ ದರ ಪರಿಷ್ಕರಣೆ ಮಾಡಲು ತೀರ್ಮಾನ ಕೈಗೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ 26 ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಕಳೆದ ನಾಲ್ಕು ತಿಂಗಳಿಂದ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಹಣ  ಪಾವತಿಸಿಲ್ಲ ಕೆಲವು ಕಾರ್ಖಾನೆಗಳು ನೆಪ ಮಾತ್ರಕ್ಕೆ ಅಲ್ಪ, ಸ್ವಲ್ಪ ಹಣ ನೀಡಿದ್ದಾರೆ. ಎಫ್‍ಆರ್‍ಪಿ ನಿಯಮದ ಪ್ರಕಾರ ಕಬ್ಬು ಸಾಗಿಸಿದ 14 ದಿನದೊಳಗೆ ಹಣ ಪಾವತಿಸುವ ನಿಯಮ ಉಲ್ಲಂಘನೆ ಮಾಡಲಾಗಿದೆ. 2 ಸಾವಿರ ಕೋಟಿಗೂ ಅಧಿಕ ಹಣವನವನ್ನು ಉಳಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
23 ರಂದು ಧಾರವಾಡದಲ್ಲಿ ನಡೆಯುವ ರಾಜ್ಯ ಮಟ್ಟದ ವಿಶ್ವ ರೈತ ದಿನಾಚರಣೆಯಲ್ಲಿ ಕೃಷಿ ಕ್ಷೇತ್ರದಲ್ಲಿ ದುಡಿದ ಕಾಯಕ ಯೋಗಿಗಳಿಗೆ ಸನ್ಮಾನ ಮಾಡಲು ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ನಾಯಕ ಜಗಜಿತ್ ಸಿಂಗ್ ಧಲೆವಾಲ ಪಂಜಾಬ್‍ನಿಂದ ಆಗಮಿಸುತ್ತಿದ್ದಾರೆ. ಇವರು ಒಂದು ವರ್ಷ ದೆಹಲಿಯ ಗಡಿಯಲ್ಲಿ ಹೋರಾಟ ಮಾಡಿದ ಪ್ರಮುಖ ರೈತ ಮುಖಂಡರಾಗಿದ್ದು, ಡಿ.19 ಮತ್ತು 20 ರಂದು ದೆಹಲಿಯಲ್ಲಿ ವಿವಿಧ ರಾಜ್ಯಗಳ ರೈತ ಮುಖಂಡರು ಹಾಗೂ ಸಂಸದರ ನಿಯೋಗದೊಂದಿಗೆ ಕೇಂದ್ರ ಕೃಷಿ ಸಚಿವ ಹಾಗೂ ಆಹಾರ ಸಚಿವರನ್ನ ಭೇಟಿ ಮಾಡಿ ಕಬ್ಬು ಬೆಳೆಗಾರರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸವಂತೆ ಒತ್ತಾಯಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಪರಶುರಾಮ್, ಸುರೇಶ್, ರೇವಣ್ಣ, ಮೈಸೂರು ಜಿಲ್ಲೆಯ ರಂಗಸಮುದ್ರ, ಹಿಟ್ಟುವಳ್ಳಿ ಗ್ರಾಮದ ನೂರಾರು ರೈತರು ಭಾಗವಹಿಸಿದ್ದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು