ಅಜೀಜ್ ಸೇಠ್ ಶಿಷ್ಯ, ಕಾಂಗ್ರೆಸ್ ಕಟ್ಟಾಳು, ಕಾರ್ಮಿಕ ಮುಖಂಡ ಕೆ.ಸಿ.ಶೌಕತ್ ಪಾಷರಿಗೆ ದಕ್ಕಿದ ನಗರ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ



ಮೈಸೂರು : ಮಾಜಿ ಸಚಿವ ದಿವಂಗತ ಅಜೀಜ್ ಸೇಠ್ ಅವರ ಖಾಸಾ ಶಿಷ್ಯ ಎಂದೇ ಗುರುತಿಸಿಕೊಂಡಿರುವ ಮಹಾ ನಗರಪಾಲಿಕೆ ಮಾಜಿ ಸದಸ್ಯರೂ ಆದ ಕೆ.ಸಿ.ಶೌಕತ್ ಪಾಷ ಅವರಿಗೆ ಮೈಸೂರು ನಗರ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ಲಭಿಸಿದೆ.
35 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಶೌಕತ್ ಪಾಷ 2013ರಲ್ಲಿ ಮಹಾನಗರಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ಈ ಕ್ಷೇತ್ರ ಮಹಿಳಾ ಮೀಸಲು ಕ್ಷೇತ್ರವಾದಾಗ ಜನರ ಒತ್ತಾಯದ ಮೇರೆಗೆ ತಮ್ಮ ಪತ್ನಿಯನ್ನು ನಿಲ್ಲಿಸಿ ಗೆಲ್ಲಿಸಿಕೊಂಡಿದ್ದರು. ಅಷ್ಟೋಂದು ಹಿಡಿತ ಕ್ಷೇತ್ರದಲ್ಲಿ ಅವರಿಗಿದೆ.
ಸರಳ, ಸಜ್ಜನಿಕೆಯ ವಿದ್ಯಾವಂತ ಮತ್ತು ಮಿತಭಾಷಿಯಾದ ಶೌಕತ್ ಪಾಷ ಅದ್ಭುತ ಕೆಲಸಗಾರ. ಗ್ಯಾಮನ್ ಕಂಪನಿಯ ನೌಕರರಾಗಿದ್ದ ಶೌಕತ್ ಪಾಷ ಕಾರ್ಮಿಕ ಮುಖಂಡರಾಗಿ ಗುರುತಿಸಿಕೊಂಡಿದ್ದರು. ನಂತರ ಮೈಸೂರು ಸಿಮೆಂಟ್ ಕಂಪನಿಯಲ್ಲಿ ಪ್ರಮುಖ ಹುದ್ದೆಯಲ್ಲಿಯೂ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮೈಸೂರು ಬೀಡಿ ಮಜ್ದೂರ್ ಯೂನಿಯನ್ ಅಧ್ಯಕ್ಷರಾಗಿದ್ದ ಮಾಜಿ ಸಚಿವ ಅಜೀಜ್ ಸೇಠ್ ಅವರಿಗೆ ತಮ್ಮ ಸಂಘದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾಗ ಅವರ ಕಣ್ಣಿಗೆ ಬಿದ್ದದ್ದು ಶೌಕತ್ ಪಾಷ. ತಕ್ಷಣ ಅವರನ್ನು ತಮ್ಮ ಸಂಘದ ಕಾರ್ಯದರ್ಶಿಯನ್ನಾಗಿ ಮಾಡಿದರು.
2009 ರಲ್ಲಿ ತಮ್ಮ ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು ಸಮಾಜ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಅಜೀಜ್ ಸೇಠ್ ಹೋರಾಟದ ಫಲವಾಗಿ ಮೈಸೂರು ಬೀಡಿ ಕಾರ್ಮಿಕರಿಗೆ ಸರ್ಕಾರ ಮಂಜೂರು ಮಾಡಿದ ಒಂದು ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ನೋಂದಣಿ ಮಾಡಿಸುವ ಕೆಲಸ ಶೌಕತ್ ಪಾಷ ಹೆಗಲಿಗೆ ಬಿತ್ತು. ಕಾರ್ಮಿಕ ಮುಖಂಡರಾಗಿದ್ದ ಶೌಕತ್ ಪಾಷ ಅವರಿಗೆ ಈ ಕೆಲಸ ಕಷ್ಟವಾಗಲಿಲ್ಲ. ಅಂದಿನಿಂದ ಜನಸಂಪರ್ಕಕ್ಕೆ ಬಂದ ಇವರು ಅಜೀಜ್ ಸೇಠ್ ಶಾಸಕರಾಗಿ, ಸಚಿವರಾಗಿ ಸಂಸದರಾಗಿ ಆಯ್ಕೆಯಾದಾಗ ಅವರ ಬಲಗೈ ಭಂಟನಾಗಿ ಕೆಲಸ ಮಾಡಿದರು.
ತಮ್ಮ ಕ್ಷೇತ್ರ ಮಾತ್ರವಲ್ಲದೇ ಇಡೀ ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ಹೊತ್ತು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸಿದವರು.
ಮೈಸೂರು ಮಹಾನಗರಪಾಲಿಕೆಯಲ್ಲಿ 2 ವರ್ಷ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ ಅನುಭವಿ ರಾಜಕಾರಣಿ ಶೌಕತ್ ಪಾಷ ಅವರನ್ನು ಕೆಪಿಸಿಸಿ ಈಗ ಮೈಸೂರು ನಗರ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಈ ಸ್ಥಾನವನ್ನು ನೀಡಿದೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ಮತ್ತೊಮ್ಮೆ ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ನಮ್ಮ ಏಕೈಕ ಗುರಿಯಾಗಿದೆ ಎಂದು ಶೌಕತ್ ಪಾಷ ಹೇಳಿದರು.

ನಗರ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶೌಕತ್ ಪಾಷ ಸಮರ್ಥ ಸಂಘಟಕರು, ಪ್ರಾಮಾಣಿಕ ವ್ಯಕ್ತಿ ಆದ ಕಾರಣ ಕ್ಷೇತ್ರದಲ್ಲಿ ಜನ ಇವರನ್ನು ನಂಬುತ್ತಾರೆ. ಪ್ರೀತಿಸುತ್ತಾರೆ. ನಾವೆಲ್ಲರೂ ಇವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸುತ್ತೇವೆ.
-ಕಲೀಂ, ಕಾಂಗ್ರೆಸ್ ಮುಖಂಡರು. 

ಮೈಸೂರು ನಗರ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆ.ಸಿ.ಶೌಕತ್ ಪಾಷ ಅವರನ್ನು ಎನ್.ಆರ್.ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಅಭಿನಂದಿಸಿದರು. ಅಲ್ತಾಫ್, ಶಾಹೀದ್, ಶುಹೇಬ್, ಮುದಸ್ಸಿರ್, ಖದೀರ್, ಯಾಸೀನ್, ಫರಾಜ್, ಕಲೀಂ, ಮಹಬೂಬ್ ಶರೀಫ್ ಇದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು