ಬೈಕ್ ಓವರ್‍ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕಾಗಿ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಹಲ್ಲೆ : ಅಪಮಾನದಿಂದ ಮನನೊಂದ ಯುವಕ ಆತ್ಮಹತ್ಯೆ

ಮುಳಬಾಗಿಲು : ಬೈಕ್‍ನಲ್ಲಿ ಓವರ್‍ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಮರಕ್ಕೆ ಕಟ್ಟಿ ಥಳಿಸಿದ್ದು, ಅವಮಾನ ತಾಳಲಾರದೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಜಾತಿ ದೌರ್ಜನ್ಯದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಬೇವಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೇವಹಳ್ಳಿಯ ಉದಯ್ ಕಿರಣ್ ಮೃತ ಯುವಕನಾಗಿದ್ದು, ಆತನ ಮೇಲೆ ಜಾತಿ ದೌರ್ಜನ್ಯವೆಸಗಿದ ಆರೋಪದ ಮೇಲೆ ಪೆತಾಂಡ್ಲಹಳ್ಳಿ ಗ್ರಾಮದ ಸವರ್ಣೀಯ ಜನಾಂಗಕ್ಕೆ ಸೇರಿದ ರಾಜು ಬಿನ್ ಗೋಪಾಲಕೃಷ್ಣಪ್ಪ, ಶಿವರಾಜ್ ಬಿನ್ ಮುನಿವೆಂಕಟಪ್ಪ, ಗೋಪಾಲಕೃಷ್ಣಪ್ಪ ಬಿನ್ ಮುನಿಸ್ವಾಮಿ, ಮತ್ತು ಮುನಿವೆಂಕಟಪ್ಪ ಬಿನ್ ಮುನಿಸ್ವಾಮಿ ಎಂಬುವವರ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 341, 34, 504, 306 ಮತ್ತು 323ರ ಅಡಿಯಲ್ಲಿ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 30ರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಮುಳಬಾಗಿಲು ತಾಲ್ಲೂಕಿನ ಬೈರಕೂರು ಹೋಬಳಿಯ ಪೆತಾಂಡ್ಲಹಳ್ಳಿ ಗ್ರಾಮದ ಸವರ್ಣೀಯ ಜನಾಂಗದ ರಾಜು ಬಿನ್ ಗೋಪಾಲಕೃಷ್ಣಪ್ಪ ರವರ ದ್ವಿಚಕ್ರ ವಾಹನವನ್ನು ಬೇವಹಳ್ಳಿಯ ಉದಯ್ ಕಿರಣ್ ಮತ್ತು ನಾಗರಾಜು ಓವರ್ ಟೇಕ್ ಮಾಡಿದರು ಎಂದು ಆರೋಪಿಸಿ ಬೈರಕೂರಿನಲ್ಲಿ ಉದಯ್ ಕಿರಣ್ ವಾಹನವನ್ನು ಅಡ್ಡಗಟ್ಟಿ ನಿಂದಿಸಿ, ಹಲ್ಲೆ ಮಾಡಿದ್ದರು ಎಂದು ಮೃತ ಯುವಕನ ಸೋದರ ಮಾವ ನಾಗರಾಜು ಆರೋಪಿಸಿದ್ದಾರೆ.
ಆ ನಂತರವೂ ಸಹ ಕಾಡೆನಹಳ್ಳಿಯಿಂದ ವಾಪಸ್ಸು ಬರುತ್ತಿದ್ದ ಉದಯ್ ಕಿರಣ್ ಮತ್ತು ನಾಗರಾಜರನ್ನು ಮತ್ತೆ ಪೆತಾಂಡ್ಲಹಳ್ಳಿ ಗ್ರಾಮದ ಬಳಿ ರಾಜು ಬಿನ್ ಗೋಪಾಲಕೃಷ್ಣಪ್ಪ, ಶಿವರಾಜ್ ಬಿನ್ ಮುನಿವೆಂಕಟಪ್ಪ, ಗೋಪಾಲಕೃಷ್ಣಪ್ಪ ಬಿನ್ ಮುನಿಸ್ವಾಮಿ, ಮತ್ತು ಮುನಿವೆಂಕಟಪ್ಪ ಬಿನ್ ಮುನಿಸ್ವಾಮಿ ಅಡ್ಡಗಟ್ಟಿ, ಹೊಡೆದು ಆತನ ದ್ವಿಚಕ್ರ ವಾಹನ ಮತ್ತು ಮೊಬೈಲ್ ಕಿತ್ತುಕೊಂಡು ನಿಮ್ಮ ಮನೆಯವರನ್ನು ಕರೆದುಕೊಂಡು ಬನ್ನಿ ಎಂದು ದೌರ್ಜನ್ಯವೆಸಗಿರುತ್ತಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಆನಂತರ ಮತ್ತೆ ತನ್ನ ವಾಹನ ಮತ್ತು ಮೊಬೈಲ್ ಕೇಳಲು ಹೋದ ಉದಯ್ ಕಿರಣ್ ನನ್ನು ಮತ್ತೆ ಪೆತಾಂಡ್ಲಹಳ್ಳಿ ಗ್ರಾಮದ ರಚ್ಚೆ ಕಟ್ಟೆಯ ಮರಕ್ಕೆ ಕಟ್ಟಿ ಹಾಕಿ, ಹೊಡೆದು, ಜಾತಿ ನಿಂದನೆ ಮಾಡಿ 
ಅತಿಹೀನವಾಗಿ ಅವಮಾನಿಸುತ್ತಿದ್ದರು. ಈ ವಿಷಯ ತಿಳಿದ ನಾನು ರಾತ್ರಿ 8.30ರ ಸಮಯದಲ್ಲಿ ನಮ್ಮ ಗ್ರಾಮದ ಹಿರಿಯರನ್ನು ಕರೆದುಕೊಂಡು ಪೆತಾಂಡ್ಲಹಳ್ಳಿಗೆ ಹೋಗಿ ಮಾತಾಡಿ ಅವರನ್ನು ಬಿಡಿಸಿಕೊಂಡು ಬಂದಿದ್ದೆವು. ಆದರೆ ರಾತ್ರಿ 10 ಗಂಟೆ ಸುಮಾರಿಗೆ ಉದಯ್ ಕಿರಣ್ ಅವಮಾನ ತಾಳಲಾರದೆ ಮನನೊಂದು ತೋಟದ ಮನೆಯಲ್ಲಿನ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಆರೋಪಿಗಳು ಪದೇ ಪದೇ ಜಾತಿ ದೌರ್ಜನ್ಯವೆಸಗಿರುವುದೇ ಕಾರಣವಾಗಿದೆ ಎಂದು ಮೃತನ ಸೋದರ ಮಾವ ನಾಗರಾಜ್ ಆರೋಪಿಸಿದ್ದಾರೆ.
ಈ ಕುರಿತು ನಂಗಲಿ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿ, ಆರೋಪಿಗಳ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. 
``ಪೊಲೀಸರು ನಾಳೆಯೊಳಗೆ ಆರೋಪಿಗಳನ್ನು ಬಂಧಿಸಿ ನ್ಯಾಯಯುತ ವಿಚಾರಣೆ ನಡೆಸಬೇಕೆಂದು ಒತ್ತಾಯಿಸುತ್ತೇವೆ. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಮುಳಬಾಗಿಲಿನ ಹೋರಾಟಗಾರರಾದ ಜೈಭೀಮ್ ಗಂಗಾಧರ್ ಎಚ್ಚರಿಕೆ ನೀಡಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು