ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಶುಲ್ಕ ಏರಿಕೆ ಖಂಡಿಸಿ ಎಐಡಿಎಸ್‌ಓ ಪ್ರತಿಭಟನೆ ಆದೇಶ ಹಿಂಪಡೆಯಲು ಒತ್ತಾಯ

ಮೈಸೂರು : ಸರ್ಕಾರ ಯಾವುದೇ ಮುನ್ಸೂಚನೆ ನೀಡದೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚು ಮಾಡಿರುವುದು ವಿದ್ಯಾರ್ಥಿ ವಿರೋಧಿ ಹಾಗೂ ಶಿಕ್ಷಣ ವಿರೋಧಿ ನಿಲುವು. ಕೂಡಲೇ ಶುಲ್ಕ ಏರಿಕೆ ಹಿಂಪಡೆಯಬೇಕೆಂದು ಒತ್ತಾಯಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ  ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.
ಸಂಟನೆಯ ಜಿಲ್ಲಾಧ್ಯಕ್ಷ ಸುಭಾಷ್ ಮಾತನಾಡಿ, ರಾಜ್ಯ ಸರ್ಕಾರ ಕಳೆದ ವರ್ಷ 10 ಸಾವಿರ ಶುಲ್ಕವನ್ನು ಹೆಚ್ಚಳ ಮಾಡಿತ್ತು.  ಪ್ರಸ್ತುತ ಶೈಕ್ಷಣಿಕ ವರ್ಷವೂ ಸಹ  ಏಕಾಏಕಿ 5 ರಿಂದ  6 ಸಾವಿರದಷ್ಟು ಹೆಚ್ಚಳ ಮಾಡಿದೆ. ಎರಡು ವರ್ಷಗಳಲ್ಲಿ 15 ಸಾವಿರ  ಹೆಚ್ಚಳವಾಗಿದೆ. ಪ್ರತಿ ವರ್ಷವೂ ನಿರಂತರವಾಗಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಶುಲ್ಕವನ್ನು ಏರಿಕೆ ಮಾಡುತ್ತಿರುವುದು ಸರ್ಕಾರದ ವ್ಯಾಪಾರಿ ಮನೋಭಾವವನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ರೀತಿ ನಿರಂತರವಾಗಿ ಶುಲ್ಕಗಳು  ಏರಿಕೆ ಆಗುತ್ತಿದ್ದರೆ ಲಕ್ಷಾಂತರ ಬಡ ಕುಟುಂಬದ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕನಸನ್ನೇ ಕೈಬಿಡುವಂತಾಗುತ್ತದೆ. ರಾಜ್ಯ ಸರ್ಕಾರ ಕೂಡಲೇ ಶುಲ್ಕ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸರ್ಕಾರ ಮುಂದೆಯೂ ಶುಲ್ಕ ಏರಿಕೆಯ ಪ್ರಸ್ತಾವನೆ ಮಾಡಬಾರದು. ಶುಲ್ಕ ಏರಿಕೆಯನ್ನು ಹಿಂಪಡೆ ಯದಿದ್ದರೇ ಸರ್ಕಾರದ ವಿರುದ್ಧ ಪ್ರಬಲವಾದ ಹೋರಾಟ ರೂಪಿಸಲಾಗುವುದು ಎಂದರು.
ಪ್ರತಿಭಟನೆ ನಂತರ ಮನವಿ ಪತ್ರವನ್ನು ಜಿಲ್ಲಾಧಿಕಾರಿ  ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಸಲ್ಲಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ,  ಉಪಾಧ್ಯಕ್ಷರಾದ ಆಸಿಯಾ ಬೇಗಂ,  ಜಿಲ್ಲೆಯ ಕಾರ್ಯಕಾರಿ ಮಂಡಳಿಯ ಸದಸ್ಯರುಗಳಾದ, ನಿತಿನ್, ಸ್ವಾತಿ ,ಹೇಮಾ, ಚಂದನ, ಚಂದ್ರಿಕಾ, ಬಸವ, ಪ್ರಜ್ವಲ್ ಇನ್ನಿತರರು ಇದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು