ಸೆನ್ ಪೊಲೀಸರಿಂದ ನಕಲಿ ಕಸ್ಟಮ್ ಅಧಿಕಾರಿಯ ಬಂಧನ

ಶಿಕ್ಷಕರೇ ಈತನ ಟಾರ್ಗೆಟ್, 7.48 ಲಕ್ಷ ರೂ. ವಂಚನೆ, ಆಟೋ ಚಾಲಕನಿಂದಲೂ ವಸೂಲಿ

ಮೈಸೂರು : ``ನಾನು ನಿಮ್ಮ ಹಳೆಯ ಸ್ಟೋಡೆಂಟ್. ಈಗ ಕಸ್ಟಮ್ ಅಧಿಕಾರಿಯಾಗಿದ್ದೇನೆ. ಏನಾದರೂ ಸಹಾಯ ಬೇಕಿದ್ದರೇ ಕೇಳಿ’’ ಎಂದು ಶಿಕ್ಷಕರನ್ನು ನಂಬಿಸಿ ಮೋಸ ಮಾಡುತ್ತಿದ್ದ ಖತರ್‍ನಾಕ್ ವಂಚಕನನ್ನು ಸೆನ್ ಪೊಲೀಸರು ಬಂಧಿಸಿ ಕಂಬಿ ಹಿಂದೆ ದೂಡಿದ್ದಾರೆ.
ಆರೋಪಿಯು ಈ ಹಿಂದೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಕೋರಿಯರ್ ಸರ್ವಿಸ್‍ನಲ್ಲಿ ಕೆಲಸಮಾಡುತ್ತಿದ್ದು, ಪ್ರಸ್ತುತ ಅಮೇಜಾನ್ ಕಂಪನಿಯಲ್ಲಿ ಸ್ಕ್ಯಾನರ್ ಆಗಿ ಕೆಲಸ ಮಾಡುತ್ತಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ. 
ಈ ಖದೀಮ ಗೂಗಲ್‍ನಲ್ಲಿ ಸರ್ಚ್ ಮಾಡಿ ಶಾಲೆಗಳ ಲ್ಯಾಂಡ್‍ಲೈನ್ ನಂಬರ್ ಪಡೆದು ನಂತರ ಕರೆ ಮಾಡಿ ನಾನು ನಿಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ನನಗೆ ಈ ಹಿಂದೆ ಪಾಠ ಮಾಡಿದ ಗುರುಗಳ ನಂಬರ್ ಬೇಕು ಎಂದು ನಾಜೂಕಾಗಿ ಮಾತನಾಡಿ ಶಿಕ್ಷಕರ ಮೊಬೈಲ್ ಸಂಖ್ಯೆ ಪಡೆದು, ನಂತರ ಶಿಕ್ಷಕರಿಗೆ ಕರೆ ಮಾಡಿ, ನಾನು ನಿಮ್ಮ ಹಳೆಯ ಸ್ಟೂಡೆಂಟ್ ಸಂತೋಷ್ ಎಂದು ಪರಿಚಯ ಮಾಡಿಕೊಂಡು ಈಗ ಕಸ್ಟಮ್ ಅಧಿಕಾರಿಯಾಗಿದ್ದೇನೆ. ನಿಮಗೇನಾದರೂ ಸಹಾಯ ಮಾಡಬೇಕಿನಿಸಿದೆ. ನಮ್ಮಲ್ಲಿ ಸೀಜ್ ಮಾಡಿದ ಚಿನ್ನ, ಇನ್ನಿತರ ವಸ್ತುಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ನಾನು ಕೊಡಿಸುತ್ತೇನೆ ಎಂದು ನಂಬಿಸಿ ಸುಮಾರು 7,48,800 ರೂ. ವಂಚನೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜತೆಗೆ ಒಬ್ಬ ಆಟೋ ಡ್ರೈವರ್‍ಗೂ ಲೋನ್ ಕೊಡಿಸುವುದಾಗಿ ಹೇಳಿ ಹಣ ಪಡೆದು ಮೋಸ ಮಾಡಿದ್ದು, ಈತನ ಮೇಲೆ ಮೈಸೂರು ಸೆನ್ ಪೊಲೀಸ್ ಠಾಣೆಯಲ್ಲಿ 6 ಪ್ರಕರಣಗಳು ದಾಖಲಾಗಿದ್ದು,
ಡಿ.8 ರಂದು ಸೆನ್ ಕ್ರೈಂ ಪೊಲೀಸರು ಈತನನ್ನು ಬಂಧಿಸಿದರು.
ಈ ವಂಚಕ ಜನರಿಂದ ಬೇರೆಯವರ ಖಾತೆಗೆ ಹಣ ಹಾಕಿಸಿಕೊಂಡು ನಂತರ ಅವರಿಂದ ನಗದು ಪಡೆದುಕೊಳ್ಳುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಈತನ ಮೇಲೆ ಬೆಂಗಳೂರಿನ ಮಾಗಡಿ ರಸ್ತೆ, ವಿಜಯನಗರ, ಆಡುಗೋಡಿ, ಹೆಚ್‍ಎಎಲ್, ವಿವಿಪುರಂ ಪೊಲೀಸ್ ಠಾಣೆಗಳಲ್ಲೂ  ಪ್ರಕರಣಗಳು ದಾಖಲಾಗಿರುತ್ತದೆ. 
ಡಿಸಿಪಿ ಪ್ರದೀಪ್ ಗುಂಟಿ ನಿರ್ದೇಶನದಲ್ಲಿ ದೇವರಾಜ ವಿಭಾಗದ ಎಸಿಪಿ ಎಂ.ಎನ್. ಶಶಿಧರ್ ಮಾರ್ಗದರ್ಶನದಲ್ಲಿ ಸೆನ್ ಕ್ರೈಂ ಇನ್ಸ್‍ಪೆಕ್ಟರ್ ಎನ್. ಜಯಕುಮಾರ್ ಪಿಎಸ್‍ಐ ಎನ್. ಅನಿಲ್‍ಕುಮಾರ್, ಎಎಸ್‍ಐ
ಸುಭಾಷ್‍ಚಂದ್ರ ಮತ್ತು ಸಿಬ್ಬಂದಿಗಳಾದ ಶ್ರೀನಿವಾಸ್, ಮಧು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಯನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿಯವರನ್ನು ಪೊಲೀಸ್ ಆಯುಕ್ತ ಬಿ.ರಮೇಶ್ ಪ್ರಶಂಶಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು