ಎಸ್‍ಬಿಐ ಆಡಳಿತ ಕಚೇರಿಯಿಂದ `ಸೈಬರ್ ಅಪರಾಧ’ ಕುರಿತು ಜಾಗೃತಿ `ಸೈಬರ್ ಕಾಂಡ’ ಬೀದಿ ನಾಟಕ ಪ್ರದರ್ಶನ

ಮೈಸೂರು : ಭಾರತೀಯ ಸ್ಟೇಟ್ ಬ್ಯಾಂಕಿನ ಆಡಳಿತ ಕಚೇರಿಯ ಸಿಬ್ಬಂದಿಗಳು `ಸೈಬರ್ ಕಾಂಡ’ ಎಂಬ ಬೀದಿ ನಾಟಕವನ್ನು ಅಭಿನಯಿಸುವ ಮೂಲಕ ಸಾರ್ವಜನಿಕರಲ್ಲಿ ಆನ್‍ಲೈನ್ ವಂಚನೆಗಳು ಮತ್ತು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿದರು.
ನಗರದ ದೇವರಾಜ ಮಾರುಕಟ್ಟೆ ಬಳಿಯ ಚಿಕ್ಕ ಗಡಿಯಾರ ಹಾಗೂ ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜು ಆವರಣದಲ್ಲಿ ನಾಟಕ ಪ್ರದರ್ಶಿಸಿ, ಸಾರ್ವಜನಿಕರು ಆನ್‍ಲೈನ್ ಮೂಲಕ ಬ್ಯಾಂಕಿಂಗ್ ವ್ಯವಹಾರಗಳನ್ನು
ನಡೆಸುವ ಸಂದರ್ಭದಲ್ಲಿ ಸೈಬರ್ ಪಾತಕಿಗಳಿಗೆ ಬಲಿಯಾಗದಂತೆ ಪಾಲಿಸಬೇಕಾದ ಮುಂಜಾಗ್ರತೆಗಳ ಬಗ್ಗೆ ಸೂಕ್ತ ತಿಳಿವಳಿಕೆ ನೀಡಲಾಯಿತು. ಯಾವುದೇ ಸಂದರ್ಭದಲ್ಲೂ ತಮಗೆ ಸಂಬಂಧಿಸಿದ ಗುಪ್ತ ಮಾಹಿತಿಯನ್ನು ಅಪರಿಚಿತರೊಡನೆ ಹಂಚಿಕೊಳ್ಳಬಾರದೆಂಬ ಸಂದೇಶವನ್ನೂ ಸಹ ಬೀದಿ ನಾಟಕದ
ಮೂಲಕ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಯಿತು. 
ನಾಟಕ ಪ್ರದರ್ಶನವನ್ನು ಮೈಸೂರು ಆಡಳಿತ ಕಛೇರಿಯ ಉಪ ಪ್ರಧಾನ ವ್ಯವಸ್ಥಾಪಕ ರಾಜೇಶ್
ಕುಮಾರ್ ಚೌಧರಿ ಹಾಗೂ ಜೆಎಸ್‍ಎಸ್ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ.
ಬಿ.ವಿ.ಸಾಂಬಶಿವಯ್ಯ ಉದ್ಘಾಟಿಸಿದರು. ನಾಟಕ ವೀಕ್ಷಿಸಲು ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು
ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು