ಮೈಸೂರಿನ ಅರ್ಕಧಾಮದಲ್ಲಿ ವಿದ್ವಾನ್ ಮಾಣಿಕ್ಯಂ ಯೋಗೇಶ್ವರನ್ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಮಹಿಳೆಯರಿಂದ ಭಜನೆ

ವರದಿ: ನಿಷ್ಕಲ ಎಸ್., ಮೈಸೂರು

ಮೈಸೂರು : ನಗರದ ಹೊರವಲಯದಲ್ಲಿರುವ ಅರ್ಕ ಫೌಂಡೇಷನ್ ಮತ್ತು ಅರ್ಕಧಾಮದಲ್ಲಿ ಭಾನುವಾರ ಸಂಜೆ ಯೋಗಿ ಶ್ರೀನಿವಾಸ ಅರ್ಕ ಅವರ ಸಾನಿಧ್ಯದಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಭಜನೆ ಕಾರ್ಯಕ್ರಮ ನಡೆಯಿತು.

ವಿದ್ವಾನ್ ಮಾಣಿಕ್ಕಂ ಯೋಗೇಶ್ವರನ್ ಅವರು ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಟ್ಟರು. ನೂರಾರು ಶೋತೃಗಳು ವಿದ್ವಾನ್ ಮಾಣಿಕ್ಯಂ ಅವರ ಸಂಗೀತಕ್ಕೆ ತಲೆದೂಗಿದರು.

ಕಾರ್ಯಕ್ರಮದಲ್ಲಿ ವಿದ್ವಾನ್ ಮಾಣಿಕ್ಯಂ ಅವರು ಹತ್ತಾರು ಶಾಸ್ತ್ರೀಯ ಸಂಗೀತ ಹಾಡುಗಳನ್ನು ಉಣಬಡಿಸಿ ಶೋತೃಗಳ ಮನಗೆದ್ದರು. ಇದೇ ವೇಳೆ ಅವರನ್ನು ಮತ್ತು ಅವರ ತಂಡದವರನ್ನು ಯೋಗಿ ಶ್ರೀನಿವಾಸ ಅರ್ಕ ಅವರು ಗೌರವಿಸಿದರು.

ಈ ಸಂದರ್ಭದಲ್ಲಿ ಯೋಗಿ ಶ್ರೀನಿವಾಸ ಅರ್ಕ ಅವರು ಮಾತನಾಡಿ, ವಿದ್ವಾನ್ ಮಾಣಿಕ್ಯಂ ಯೋಗೇಶ್ವರನ್ ಅವರು ಸದ್ಯ ಜರ್ಮನಿ ದೇಶದ ಹ್ಯಾಂಬರ್ಗ್‌ನಲ್ಲಿದ್ದಾರೆ. ಅವರನ್ನು ಭಾರತಕ್ಕೆ ಕರೆಸಿ ಅವರಿಂದ ನಮ್ಮ ಭಕ್ತರಿಗೆ ಸಂಗೀತವನ್ನು ಉಣಬಡಿಸಬೇಕು ಎಂಬ ಉತ್ಸಾಹದಿಂದ ಅವರನ್ನು ನಮ್ಮ ಕೋರಿಕೆ ಮೇಲೆ ಕರೆಸಲಾಗಿದೆ. ಪಾಶ್ಚಿಮಾತ್ಯ ಸಂಗೀತದ ಹಾವಳಿಯ ನಡುವೆ ಭಾರತೀಯ ಶಾಸ್ತ್ರೀಯ ಸಂಗೀತ ನಮ್ಮ ಮನಸ್ಸನ್ನು ಮುದಗೊಳಿಸುವುದರ ಜತೆಗೆ, ಸಂಗೀತದಿಂದ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು. ನಂತರ ಹತ್ತಾರು ಮಹಿಳೆಯರ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

ವಿದ್ವಾನ್ ಮಾಣಿಕ್ಕಂ ಯೋಗೇಶ್ವರನ್ ಅವರ ಸಂಗೀತಕ್ಕೆ ವಿದ್ವಾನ್ ಮಧುಸೂದನ್ ಪಿಟೀಲು, ವಿದ್ವಾನ್ ಎಂ.ಆರ್. ಮಂಜುನಾಥ್ ಮೃದಂಗ, ವಿದ್ವಾನ್ ಎಂ.ಎಸ್. ಜಯರಾಮ್-ಖಂಜಿರಾ, ವಿದ್ವಾನ್ ಎಂ.ಎಸ್. ಕಿರಣ್ ಕುಮಾರ್ ಘಟಂ, ವಿದ್ವಾನ್ ಎಂ.ಆರ್. ಮೋಹನ್ ಮೋರ್ಸಿಂಗ್, ವಿದ್ವಾನ್ ಆರ್. ರವೀಂದ್ರ ತಂಬೂರದಲ್ಲಿ ಸಾಥ್ ನೀಡಿದರು.