ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ಪರಿಹಾರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ
ಡಿಸೆಂಬರ್ 03, 2022
ಬೆಂಗಳೂರು: ಚಿರತೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ 15 ಲಕ್ಷ ರೂ,ಗಳ ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಶನಿವಾರ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಆನೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ನೀಡಿದಂತೆ ಚಿರತೆ ದಾಳಿಯಲ್ಲಿ ಮೃತಪಟ್ಟವರ ಕುಟುಂಬಕ್ಕೂ ಪರಿಹಾರ ಒದಗಿಸಲಾಗುವುದು. ಮೊದಲು ಇಂತಹ ಘಟನೆಗಳು ಕಾಡಂಚಿನ ಗ್ರಾಮಗಳಲ್ಲಿ ನಡೆಯುತ್ತಿತ್ತು. ಈಗ ಬೆಂಗಳೂರಿನ ಆಸುಪಾಸಿನಲ್ಲಿ ಆಗುತ್ತಿದೆ. ಇದನ್ನು ಸರ್ಕಾರ ಮತ್ತು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಕಳೆದ ಹಲವಾರು ದಿನಗಳಿಂದ ಚಿರತೆಗಳ ಸೆರೆಗೆ ಪ್ರಯತ್ನ ಮಾಡಲಾಗುತ್ತಿದ್ದು ಬಲೆಯನ್ನೂ ಹಾಕಲಾಗಿದೆ. ಸಾಧ್ಯವಾದರೆ ಜೀವಂತವಾಗಿ ಹಿಡಿದು ಕಾಡಿಗೆ ಬಿಡಲು ಇಲಾಖೆಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ವಿಶೇಷ ತಂಡ: ಬೆಂಗಳೂರು ಹಾಗೂ ಮೈಸೂರು ವಲಯದಲ್ಲಿ ಆನೆ ಕಾರಿಡಾರ್ ಸುತ್ತಮುತ್ತ ಚಿರತೆಗಳೂ ಇವೆ. ಚಿರತೆ ದಾಳಿ ಆಗುತ್ತಿರುವುದನ್ನು ತಡೆಯಲು ವಿಶೇಷ ತಂಡವನ್ನು ರಚಿಸಲಾಗಿದ್ದು, ನಿರ್ದಿಷ್ಟವಾಗಿ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಅವುಗಳನ್ನು ನಿಯಂತ್ರಿಸಲು ಹಾಗೂ ಕಾಡು ಬಿಟ್ಟು ಹೊರಗಡೆ ಬಂದಿರುವ ಚಿರತೆಗಳನ್ನು ಹಿಡಿಯಲು ತಂಡ ಕಾರ್ಯಾಚರಣೆ ಮಾಡಲಿದೆ ಎಂದರು. ``ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಚಿರತೆ ದಾಳಿಗಳು ಹೆಚ್ಚಾಗಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಜತೆಗೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲೂ ಕುರಿಗಾಹಿ ವೃದ್ಧನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.’’
0 ಕಾಮೆಂಟ್‌ಗಳು