ಮಹಿಷಾ ದಸರಾ ಕುರಿತ ಸಂಸದರ ಹೇಳಿಕೆ ಉದ್ಧಟತನದ್ದು : ದಲಿತ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಆಕ್ರೋಶ

ಮೈಸೂರು : ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡಿಲ್ಲಎಂಬ ಸಂಸದ ಪ್ರತಾಪ್‌ಸಿಂಹ ಅವರ ಹೇಳಿಕೆ ಉದ್ಧಟತನದ್ದಾಗಿದೆ. ಅವರು ಪೊಲೀಸರ ನೆರವಿನಿಂದ ಚಾಮುಂಡಿಬೆಟ್ಟದಲ್ಲಿ ಆಚರಿಸದಂತೆ ತಡೆದರೂ ಮಹಿಷ ದಸರಾ ಆಚರಣೆ ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ದಲಿತ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ತಿಳಿಸಿದರು.

ಈ ಕುರಿತು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೆಲ್ಲಾ ಈ ದೇಶದ ಮೂಲ ನಿವಾಸಿಗಳಾಗಿದ್ದು, ಅಂಬೇಡ್ಕರ್ ನೀಡಿರುವ ಸಂವಿಧಾನದಿಂದಾಗಿ ನಮಗೆ ಕಾನೂನಿನ ಅರಿವಿದೆ. ಆದರೆ ಸಂಸದ ಪ್ರತಾಪ್‌ಸಿಂಹ ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಅವರು ಜನರನ್ನು ಉದ್ಧಾರ ಮಾಡಲು ಸಂಸದರಾಗಿರುವುದನ್ನು ಮರೆತು ದೇಶ ಹಾಳು ಮಾಡುತ್ತಿದ್ದಾರೆಂದು ಆರೋಪಿಸಿದರು.

ಅಲ್ಲದೆ, ಅವರಿಗೆ ಟಿಪ್ಪು ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಟಿಪ್ಪು ಸಮಾನತೆಗಾಗಿ ಶ್ರಮಿಸಿದ ವ್ಯಕ್ತಿ. ಇನ್ನು, ಪ್ರತಿ ಸಂದರ್ಭದಲ್ಲೂ ಸಂವಿಧಾನ ತಿರುಚುವ ಕೆಲಸ ನಡೆಯುತ್ತಿದೆ. ಎಸ್‌ಸಿ, ಎಸ್‌ಟಿಗಳ ಸೌಲಭ್ಯ ಕಡಿತಗೊಳಿಸಲಾಗಿದೆ. ದಲಿತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಸಾಮರ್ಥ್ಯವಿದ್ದರೆ ಸಂಸದ ಈ ಕುರಿತು ಮಾತನಾಡಲಿ ಎಂದು ಸವಾಲೆಸೆದರು.

ಜೊತೆಗೆ, ಸಂಸದರಿಗೆ ಕೆಲವೇ ತಿಂಗಳಲ್ಲಿ ಬರುವ ಚುನಾವಣೆ ವೇಳೆ ಬುದ್ಧಿ ಕಲಿಸಲಾಗುತ್ತದೆ ಎಂದು ಎಚ್ಚರಿಸಿದರು.

ಸಿದ್ದಸ್ವಾಮಿ, ಚಿಕ್ಕಂದಾನಿ, ಸಿದ್ದಪ್ಪ, ಎಸ್. ರಾಜಯ್ಯ ಹಾಜರಿದ್ದರು.