ವಿಶ್ವಕರ್ಮ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಒತ್ತಾಯ : ನಾಳೆ ಕೆಪಿ ನಂಜುಂಡಿ ನೇತೃತ್ವದಲ್ಲಿ ಮೇಲುಕೋಟೆ ಹೋಬಳಿ ಮಟ್ಟದ ಸಭೆ
ನವೆಂಬರ್ 03, 2022
ಪಾಂಡವಪುರ : ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ಕೈಗೊಳ್ಳಲು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ನಿರ್ಧರಿಸಿದ್ದು, ಈ ಬಗ್ಗೆ ಹೋರಾಟದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಲು ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಅವರು ನಾಳೆ ಪಾಂಡವಪುರಕ್ಕೆ ಆಗಮಿಸಲಿದ್ದು, ಮೇಲುಕೋಟೆ ಹೋಬಳಿ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಹೇಮಂತ್ ಕುಮಾರ್ ತಿಳಿಸಿದರು. ಸುಂಕಾತೊಣ್ಣೂರು ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ೪೦ ಲಕ್ಷ ವಿಶ್ವಕರ್ಮ ಸಮುದಾಯದ ಜನರಿದ್ದಾರೆ. ಪಾಂಡವಪುರ ತಾಲ್ಲೂಕಿನಲ್ಲಿ ದುದ್ದ ಹೋಬಳಿ ಸೇರಿದಂತೆ ೨೫ ಸಾವಿರ ಜನಸಂಖ್ಯೆ ಇದೆ. ಆದಾಗ್ಯೂ ನಮ್ಮ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ನಾವು ತೀರಾ ಹಿಂದುಳಿದಿದ್ದೇವೆ. ಈ ಕಾರಣದಿಂದ ನಮ್ಮ ಸಮುದಾಯವನ್ನು ಎಸ್‌ಟಿ ಗೆ ಸೇರ್ಪಡೆ ಮಾಡಬೇಕೆಂದು ಅವರು ಒತ್ತಾಯಿಸಿದರು. ಕಾರ್ಯಕ್ರಮವು ಶುಕ್ರವಾರ ಮದ್ಯಾಹ್ನ ಸುಂಕಾತೊಣ್ಣುರು ಗ್ರಾಮದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅವರು ಕೋರಿದರು. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾರಾಯಣಸ್ವಾಮಿ, ಯುವ ಅಧ್ಯಕ್ಷ ಮೋಹನ್ ಕುಮಾರ್, ಮೇಲುಕೋಟೆ ವಿಭಾಗದ ಕಾರ್ಯದರ್ಶಿ ಕಾಂತರಾಜು, ಮುಖಂಡರಾದ ಯೋಗಾಚಾರಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
0 ಕಾಮೆಂಟ್‌ಗಳು