ಮಂಡ್ಯ : ರಸ್ತೆ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಬೈಕ್ ನಿಂದ ಕೆಳಕ್ಕೆ ಬಿದ್ದ ಯೋಧನ ಮೇಲೆ ಲಾರಿ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಗರದ ಆನೆಕೆರೆ ಬೀದಿಯ ಕರಿಮನೆ ಗೇಟ್ ಬಳಿ ಭಾನುವಾರ ಸಂಜೆ ನಡೆದಿದೆ.
ತಾಲೂಕಿನ ಸಾತನೂರು ಗ್ರಾಮದ ನಿವಾಸಿ ಮಿಲಿಟರಿ ಕುಮಾರ್ (35) ಎಂಬಾತ ಮೃತ ವ್ಯಕ್ತಿ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ ಯೋಧ ಕುಮಾರ್ ಪರೀಕ್ಷೆಯೊಂದನ್ನು ಬರೆಯುವ ಸಲುವಾಗಿ ಊರಿಗೆ ವಾಪಸ್ಸಾಗಿದ್ದರು. ಭಾನುವಾರ ಮಧ್ಯಾಹ್ನ ತಂದೆಯೊಂದಿಗೆ ಸಾತನೂರಿನಿಂದ ಮಂಡ್ಯಕ್ಕೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಕರಿಮನೆ ಗೇಟ್ ಬಳಿ ಬೈಕ್ ಸವಾರನೊಬ್ಬ ರಸ್ತೆಯಲ್ಲಿದ್ದ ದೊಡ್ಡ ಗುಂಡಿಯೊಂದನ್ನು ತಪ್ಪಿಸಲು ಬೈಕ್ ಎಡಕ್ಕೆ ಚಲಿಸಿದ್ದಾನೆ. ಆ ವೇಳೆ ಹಿಂದೆ ಬರುತ್ತಿದ್ದ ಕುಮಾರ್ ಅವರ ಬೈಕ್ ಮುಂದೆ ಹೋಗುತ್ತಿದ್ದ ಬೈಕ್ ಗೆ ತಗುಲಿ ಕುಮಾರ್ ನೆಲಕ್ಕೆ ಉರುಳಿದ್ದಾರೆ. ಆಗ ಹಿಂದಿನಿಂದ ಮಂಡ್ಯ ಕಡೆಗೆ ಬರುತ್ತಿದ್ದ ಲಾರಿಯು ಕುಮಾರ್ ತಲೆ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಕೊನೆಯುಸಿರೆಳೆದರು.
ಘಟನೆಯಲ್ಲಿ ಕುಮಾರ್ ಅವರ ತಂದೆ ಪ್ರಾಣಾಪಾಯದಿಂದ ಪಾರಾಗಿ ದ್ದಾರೆ. ಈ ಸಂಬಂಧ ಸೆಂಟ್ರಲ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 ಕಾಮೆಂಟ್‌ಗಳು