ಟಿಪ್ಪು ಸ್ವಭಾವತಃ ಕ್ರೂರಿಯಾಗಿದ್ದು, ತನ್ನ ಶತೃಗಳನ್ನು ನಂದಿಬೆಟ್ಟದಿಂದ ಕೆಳಕ್ಕೆ ತಳ್ಳಿ ಸಾಯಿಸುತ್ತಿದ್ದ : ಡಾ.ಎಸ್.ಎಲ್.ಭೈರಪ್ಪ
ನವೆಂಬರ್ 13, 2022
ಪೊಲೀಸ್ ಬಂದೋಬಸ್ತ್ ನಡುವೆ ಅಡ್ಡಂಡ ಕಾರ್ಯಪ್ಪ ಬರೆದಿರುವ ಟಿಪ್ಪುವಿನ ನಿಜ ಕನಸುಗಳು ನಾಟಕ ಕೃತಿ ಬಿಡುಗಡೆ
ಮೈಸೂರು : ಟಿಪ್ಪು ಸ್ವಭಾವತಃ ಕ್ರೂರಿಯಾಗಿದ್ದು, ತನ್ನ ಶತೃಗಳನ್ನು ನಂದಿಬೆಟ್ಟದಿಂದ ಕೆಳಕ್ಕೆ ತಳ್ಳಿ ಸಾಯಿಸುತ್ತಿದ್ದನು. ಇಂತಹ ವ್ಯಕ್ತಿಯ ಜಯಂತಿ ಆಚರಣೆ ಮೂಲಕ ರಾಜಕಾರಣಿಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ್ದರು ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದರು. ರಂಗಾಯಣದ ರೆಪರ್ಟರಿ ಹಾಲ್‍ನಲ್ಲಿ ಭಾನುವಾರ ಸಂಜೆ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬರೆದಿರುವ ಟಿಪ್ಪುವಿನ ನಿಜ ಕನಸುಗಳು ನಾಟಕ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾ ಡಿದರು. ಮೈಸೂರು ಒಡೆಯರ್ ಆಡಳಿತದಲ್ಲಿ ಕನ್ನಡ ಆಡಳಿತ ಭಾಷೆಯಾಗಿತ್ತು. ನಂತರ ಟಿಪ್ಪು ತನ್ನ ಆಳ್ವಿಕೆಯಲ್ಲಿ ಕನ್ನಡದ ಮೇಲೆ ಪರ್ಷಿಯನ್ ಭಾಷೆಯನ್ನು ಹೇರಿದರು. ವಿಶೇಷವಾಗಿ ಕಂದಾಯ ಇಲಾಖೆಯ ದಾಖಲೆಗಳ ಮೇಲೆ ಪರ್ಷಿಯನ್ ಭಾಷೆಯ ದಾಳಿ ನಡೆದಿದೆ. ಖಾತೆ, ಕಂದಾಯ, ಖುಷ್ಕಿ, ತರಿ, ಜಹಗೀರು ಇವೆಲ್ಲವೂ ಪರ್ಷಿಯನ್ ಭಾಷೆಯಾಗಿದೆ. ಇಂತಹ ಕನ್ನಡ ದ್ರೋಹಿ ಟಿಪ್ಪುವನ್ನು ಕೆಲವು ರಾಜಕಾರಣಿಗಳು ಕನ್ನಡದ ಕುವರ ಅಂತಾರೆ ನಾಚಿಕೆಯಾಗಬೇಕು ಎಂದರು. ಓಟಿಗಾಗಿ ಜನ ಪ್ರತಿನಿಧಿಗಳು ಹೆತ್ತ ತಾಯಿಯ ಜುಟ್ಟು ಹಿಡಿದು ಕಳಿಸಲೂ ಹೇಸುವುದಿಲ್ಲ ಎಂದು ಕುಟುಕಿದ ಭೈರಪ್ಪ, ಛತ್ರಪತಿ ಶಿವಾಜಿಯನ್ನು ಕೊಲೆ ಮಾಡಲು ಅಫ್ಜಲ್ ಖಾನ್ ಸಂಚು ರೂಪಿಸಿ ಶಿವಾಜಿ ಭೇಟಿ ವೇಳೆ ಕೊಲೆ ಮಾಡಲು ಯತ್ನಿಸಿದಾಗ ಶಿವಾಜಿಗೆ ಈ ವಿಷಯ ಮೊದಲೇ ತಿಳಿದು ಅಫ್ಜಲ್ ಖಾನ್‍ನನ್ನು ಶಿವಾಜಿ ಕೊಲೆ ಮಾಡುತ್ತಾನೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದ ಸ್ಥಳವನ್ನು ನಾನು ನೋಡಲು ಹೋದಾಗ ಅಫ್ಜಲ್ ಖಾನ್ ಸತ್ತ ಸ್ಥಳ ಈಗ ದರ್ಗಾ ಆಗಿದೆ. ಇದು ಹೇಗೆ ಸಾಧ್ಯ ಎಂದು ನಾನು ಅಲ್ಲಿಯವರನ್ನು ಕೇಳಿದಾಗ ಚುನಾವಣೆಗೆ ಸ್ಪರ್ಧಿಸಿದ್ದ ರಾಜಕಾರಣಿಯೊಬ್ಬರನ್ನು ಈ ಭಾಗದ ಮತದಾರರು ಈ ಸ್ಥಳ ದರ್ಗಾಕ್ಕೆ ಬಿಟ್ಟರೆ ಮಾತ್ರ ನಾವು ನಿಮಗೆ ಮತ ಹಾಕುತ್ತೇವೆ ಎಂದು ಕೋರಿಕೆ ಇಟ್ಟಾಗ ಆ ರಾಜಕಾರಣಿ ಸ್ಥಳವನ್ನು ದರ್ಗಾಕ್ಕೆ ಬಿಟ್ಟುಕೊಟ್ಟರು. ಇಂತಹವರಿಂದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವೇ? ಅಡ್ಡಂಡ ಕಾರ್ಯಪ್ಪ ಬರೆದಿರುವ ಟಿಪ್ಪುವಿನ ನಿಜ ಕನಸುಗಳು ನಾಟಕವನ್ನು ಎಲ್ಲರೂ ಓದಿ, ನಾಟಕ ಪ್ರದರ್ಶನವನ್ನು ವೀಕ್ಷಿಸಿ ಎಲ್ಲರಿಗೂ ತಿಳಿಸಿ ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಹಿಂದಿ ಹೇರಿಕೆ ವಿರುದ್ಧ ಹೋರಾಟ ಮಾಡುವವರು ಟಿಪ್ಪು ಕನ್ನಡ ಭಾಷೆಯ ಮೇಲೆ ಪರ್ಷಿಯನ್ ಭಾಷೆ ಹೇರಿದರ ವಿರುದ್ಧ ಹೋರಾಟ ಮಾಡುವುದಿಲ್ಲವೇಕೆ? ನಾವು ಟಿಪ್ಪುವಿನ ಎಲ್ಲಾ ಗುರುತುಗಳನ್ನು ಅಳಿಸುತ್ತೇವೆ. 2006 ರಲ್ಲಿ ಡಿ.ಹೆಚ್.ಶಂಕರಮೂರ್ತಿ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಟಿಪ್ಪು ಕನ್ನಡ ವಿರೋಧಿ ಎಂದು ಹೇಳಿಕೆ ನೀಡಿದ್ದನ್ನು ಎಡ ಪಂಥೀಯ ಸಾಹಿತಿಗಳು ವಿರೋಧ ಮಾಡಿ, ಗಿರೀಶ್ ಕಾರ್ನಾಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ಗಿರೀಶ್ ಕಾರ್ನಾಡ್ ಟಿಪ್ಪುವಿನ ಕನಸುಗಳು ನಾಟಕ ಬರೆದು ಪ್ರದರ್ಶನ ಮಾಡಿದ್ದ ಬಗ್ಗೆ ದಾಖಲೆ ಕೇಳಿದಾಗ ಅವರು ನನ್ನ ನಾಟಕದ ಕತೆ ಕಾಲ್ಪಾನಿಕ ಎಂದು ಹೇಳಿ ಜಾರಿಕೊಂಡರು. ಅದೇ ರೀತಿ ಸಂಜಯ್ ಖಾನ್ ನಿರ್ಮಿಸಿದ್ದ ಟಿಪ್ಪು ದಾರಾವಾಹಿಯೂ ವಿವಾದಕ್ಕೆ ಒಳಗಾದಾಗ ಇದು ಕಾಲ್ಪಾನಿಕ ಕತೆ ಎಂದು ಅವರೇ ಸುಪ್ರೀಂ ಕೋರ್ಟ್‍ಗೆ ಹೇಳಿದ್ದಾರೆ. ಟಿಪ್ಪು ಪರವಾಗಿ ಬರೆದ ಯಾವುದೇ ಕೃತಿಗಳಿಗೆ ದಾಖಲೆ ಇಲ್ಲ. ಆದರೆ, ಟಿಪ್ಪು ವಿರುದ್ಧ ಬರೆದ ಎಲ್ಲಾ ಪುಸ್ತಕಗಳಿಗೂ ದಾಖಲೆ ಇದೆ ಎಂದರು. ನಾವು ಪುಸ್ತಕಗಳಲ್ಲಿ ಟಿಪ್ಪುವನ್ನು ಮೈಸೂರು ಹುಲಿ ಎಂದು ಓದುತ್ತಾ ಬಂದಿದ್ದೇವು. ಆದರೆ ಈಗ ಟಿಪ್ಪುವಿನ ನಿಜ ಬಣ್ಣ ಬಯಲಾಗಿದೆ. ಐದೂವರೆ ಅಡಿ ಎತ್ತರದ ಟಿಪ್ಪು ಹುಲಿಯನ್ನು ಕೊಲ್ಲಲು ಸಾಧ್ಯವೇ ಎಂದು ವ್ಯಂಗ್ಯವಾಡಿ, ಟಿಪ್ಪು ತನ್ನ ಆಳ್ವಿಕೆಯಲ್ಲಿ ನಗರಗಳ ಹೆಸರುಗಳನ್ನು ಬದಲಿಸಿದ್ದ, ನಾವು ಈಗ ಟಿಪ್ಪುವಿನ ಎಲ್ಲಾ ಗುರುತುಗಳನ್ನು ಅಳಿಸುತ್ತೇವೆ ಎಂದರು. ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯುವ ರಂಗಾಯಣ ಸುತ್ತಾ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆವರಣ ಪ್ರವೇಶಿಸುವ ಎಲ್ಲರನ್ನು ತಪಾಸಣೆ ಮಾಡಿ ನಂತರ ಒಳಗೆ ಬಿಡಲಾಯಿತು. ಕೃತಿಕಾರ ಅಡ್ಡಂಡ ಕಾರ್ಯಪ್ಪ, ಸಾಮರಸ್ಯ ವೇದಿಕೆಯ ವಾದಿರಾಜ್, ಲೇಖಕ ರೋಹಿತ್ ಚಕ್ರತೀರ್ಥ ಮುಂತಾದವರು ಇದ್ದರು.
0 ಕಾಮೆಂಟ್‌ಗಳು