`ಕೈ’ ಬಿಟ್ಟಿದ್ದ ಗ್ರಾಮಗಳಿಗೆ ಇಂದು ಧ್ರುವನಾರಾಯಣ ಪಾದಯಾತ್ರೆ

ವರದಿ-ಹೆಚ್.ಎಸ್.ಚಂದ್ರ, ನಂಜನಗೂಡು 

ನಂಜನಗೂಡು : ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪಾದಯಾತ್ರೆ ವೇಳೆ ಕಾರಣಾಂತರದಿಂದ ಕೈ ಬಿಟ್ಟಿದ್ದ ಹಲವಾರು ಗ್ರಾಮಗಳಲ್ಲಿ ಕೆಪಿಸಿಸಿ ಕಾಯಾಧ್ಯಕ್ಷ ಆರ್.ದ್ರುವನಾರಾಯಣ ಇಂದು ಪಾದಯಾತ್ರೆ ನಡೆಸಿ ಜನರ ಕುಂದು ಕೊರತೆ ಆಲಿಸಿದರು.
ತಾಲ್ಲೂಕಿನ ಕುಳ್ಳಕನಹುಂಡಿ, ದೇವರಸನ ಹಳ್ಳಿ, ಸಿಂಗಾರಿಪುರ, ಮಾಡ್ರಳ್ಳಿ, ಹೊಸೂರು, ಕೊಡಿ ನರಸೀಪುರ ಮತ್ತು ಮುಳ್ಳೂರು ಗ್ರಾಮಗಳಿಗೆ ಭೇಟಿ ನೀಡಿದ ಆರ್.ಧ್ರುವನಾರಾಯಣ್ ಬಿಜೆಪಿ   ಸರ್ಕಾರದ ವಿರುದ್ಧ ಹರಿಹಾಯ್ದರು.
ರಾಜ್ಯದಲ್ಲಿ ಲಕ್ಷಾಂತರ ಯುವಕರು ನಿರುದ್ಯೋಗಿಳಾಗಿದ್ದಾರೆ. ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ, ದಿನನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಗಗನಕೇರಿದ್ದು, ಜನ ಜೀವನ ಕಷ್ಟವಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇದ್ದ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಈಗ ದುಪ್ಪಟ್ಟಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಬಡವರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಬಿಜೆಪಿ ಸರ್ಕಾರ ಅವುಗಳಿಗೆ ಅನುದಾನ ಕಡಿತ ಮಾಡಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಬಡವರಿಗೆ ಒಂದು ಮನೆಯನ್ನೂ ಕೊಟ್ಟಿಲ್ಲ. ಇದು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಸಾಬೀತಾಗಿದೆ ಎಂದು ಕಿಡಿ ಕಾರಿದರು.
ಪರ್ಸೆಂಟೇಜ್ ವಿಷಯದಲ್ಲಿ ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ದೇಶದಲ್ಲಿ ಕೋಮುವಾದ ಸೃಷ್ಟಿಸಿ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿರುವುದೇ ಬಿಜೆಪಿಯವರ ದೊಡ್ಡ ಸಾಧನೆ ಎಂದದು.
ಮಾಜಿ ಶಾಸಕ ಕಳೆಲೆ ಕೇಶವಮೂರ್ತಿ, ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಕಾಂಗ್ರೆಸ್ ಪ್ರದೇಶ ಸಮಿತಿ ರಾಜ್ಯ ಎಸ್.ಟಿ. ಘಟಕದ ಪ್ರಧಾನ ಕಾರ್ಯದರ್ಶಿ ಹೆಡತಲೆ ದೊರೆಸ್ವಾಮಿ ನಾಯಕ, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ  ಲತಾ ಸಿದ್ಧಶೆಟ್ಟಿ, ಬ್ಲಾಕ್ ಅಧ್ಯಕ್ಷ ಕೆ.ಜಿ.ಮಹೇಶ್, ಹುಲ್ಲಳ್ಳಿ ಬ್ಲಾಕ್ ಅಧ್ಯಕ್ಷ ಶ್ರೀಕಂಠ ನಾಯಕ, ಕೆ.ಮಾರುತಿ, ವಕೀಲ ನಾಗರಾಜಯ್ಯ, ಪುಂಡಿ ನಾಗರಾಜ್, ಶಿವ ದೇವರು, ಪ್ರದೀಪ್. ಕುಳ್ಳಯ್ಯ, ಸಿಎಂ ಶಂಕರ್, ಮಮತಾ ಬೆಳ್ಳಶೆಟ್ಟಿ, ಜಯಮಾಲಾ ಬೀರೇಗೌಡ, ಪ್ರಜ್ವಲ್ ಇನ್ನಿತರರು ಇದ್ದರು