26 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮೈಸೂರು : ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಜೋಕರ್ ಎಂದು ಸಂಬೋಧಿಸಿರುವ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಶಾಸಕ ಎಲ್.ನಾಗೇಂದ್ರ ಸಲಹೆ ನೀಡಿದರು.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಪ್ರಾಧಿಕಾರದ ಅನುದಾನ 26 ಲಕ್ಷ ರೂ. ವೆಚ್ಚದಲ್ಲಿ ನಗರದ ಸೂರ್ಯ ಬೇಕರಿ ವೃತ್ತದಿಂದ ಮಂಚೇಗೌಡನಕೊಪ್ಪಲು ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷದ ಅಧ್ಯಕ್ಷರಿಗೆ ಅವರದೇ ಆದ ಘನತೆ ಗೌರವಗಳು ಇರುತ್ತವೆ. ಇವರ ಪಕ್ಷದ ಅಧ್ಯಕ್ಷರ ಬಗ್ಗೆ ಮಾತನಾಡಲು ನೂರು ವಿಷಯಗಳಿದ್ದರೂ ನಾವು ಮಾತನಾಡಲ್ಲ. ಏಕೆಂದರೇ ಒಂದು ಪಕ್ಷದ ಅಧ್ಯಕ್ಷರನ್ನು ಶಾಸಕನಾಗಿ ನಾನು ಗೌರವಿಸುತ್ತೇನೆ. ಅವರ ಸಮನಾಗಿ ಇರುವವರು ಅವರ ಬಗ್ಗೆ ಮಾತನಾಡಲಿ ಎಂದು ಸಲಹೆ ನೀಡಿದರು.
ಮೋದಿಯವರನ್ನು ಇಡೀ ಜಗತ್ತೇ ಹೊಗಳುತ್ತಿದೆ. ಅವರು ವಿಶ್ವ ನಾಯಕರ ಪಟ್ಟಿಗೆ ಸೇರುತ್ತಾರೆ. ಲಕ್ಷ್ಮಣ್ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಇದು ಲಕ್ಷ್ಮಣ್ ಘನತೆಗೆ ಗೌರವ ತರುವುದಿಲ್ಲ. ಈಗಾಗಲೇ ಯಾರು ಜೋಕರ್ ಎಂದು ಜನ ತೀರ್ಮಾನ ಮಾಡಾಗಿದೆ. ಲಕ್ಷ್ಮಣ್ ಅವರನ್ನು ಶಾಶ್ವತವಾಗಿ ಮಾತನಾಡಲು ಜನರೇ ಮೂಲೆಗುಂಪು ಮಾಡಿದ್ದಾರೆ. ನಮ್ಮ ಅಧ್ಯಕ್ಷರ ಬಗ್ಗೆ ಏನು ಗೊತ್ತು ಇವರಿಗೆ ಎಂದು ಕಿಡಿ ಕಾರಿದರು.
ಮೈಸೂರಿನಲ್ಲಿ ಸೂಪರ್ ಸ್ಪೇಷಾಲಿಟಿ ಕ್ಯಾನ್ಸರ್ ಆಸ್ಪತ್ರೆಗೆ ಮೊದಲ ಕಂತಾಗಿ 50 ಕೋಟಿ ಹಣವನ್ನು ಸರ್ಕಾರ ಬಿಡುಗಡೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಇನ್ನೂ 10 ಕೋಟಿ ಸೇರಿಸಿ ಒಟ್ಟು 60 ಕೋಟಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಆಸ್ಪತ್ರೆ ನಿರ್ಮಾಣಕ್ಕೆ ಒಟ್ಟು 240 ಕೋಟಿ ವೆಚ್ಚವಾಗಲಿದೆ ಎಂದರು.
ಮೈಸೂರಿನಲ್ಲಿ ಸೂಪರ್ ಸ್ಪೇಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದಿಂದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಮೈಸೂರು ಜನತೆಯ ಪರವಾಗಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಆರೋಗ್ಯ ಸಚಿವ ಡಿ.ಸುಧಾಕರ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವ ರಿಗೆ ಅಭಿನಂದನೆ ಸಲ್ಲಿಸಿದರು.
ಪಾಲಿಕೆ ಸದಸ್ಯರಾದ ಪ್ರೇಮ ಶಂಕರೇಗೌಡ, ಶ್ರೀಧರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುನೀತ್, ವಾರ್ಡ್ ಅಧ್ಯಕ್ಷರಾದ ನಂದೀಶ್, ಶ್ರೀನಾಥ್, ಕಿರಣ್ ಸುಖದಾರೆ, ಮುಖಂಡರುಗಳಾದ ಯುವ ಮೋರ್ಚಾ ಪ್ರಮೋದ್, ಗೋವಿಂದ, ಚಾಮರಾಜ ಕ್ಷೇತ್ರದ ಭಾಜಪ ಮಹಿಳಾ ಮೋರ್ಚಾದ ಪ್ರೇಮ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಎಇಇ ಶ್ರೀನಿವಾಸ್, ಪುಟ್ಟನಾಗರಾಜು, ಗುತ್ತಿಗೆದಾರರಾದ ಎಂ.ಎಸ್.ರೇವಣ್ಣ ಮುಂತಾದವರು ಹಾಜರಿದ್ದರು.
0 ಕಾಮೆಂಟ್‌ಗಳು