ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಕೆ.ಎಂ.ಅನಿಲ್ ಕುಮಾರ್ ನೇತೃತ್ವದಲ್ಲಿ ಮಂಡ್ಯದಲ್ಲಿ ಯಶಸ್ವಿಯಾಗಿ ನಡೆದ `ಜೈ ಭೀಮ್ ಜನಜಾಗೃತಿ ಜಾಥಾ’
ನವೆಂಬರ್ 06, 2022
ಮಂಡ್ಯ : ಸಂವಿಧಾನದ ಆಶಯಗಳು ಹಕ್ಕು ಮತ್ತು ಅಧಿಕಾರಗಳ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬಹುಜನ ಸಮಾಜ ಪಕ್ಷದ ವತಿಯಿಂದ ನಡೆಯುತ್ತಿರುವ ಜೈ ಭೀಮ್ ಜನ ಜಾಗೃತಿ ಜಾಥಾ ಮಂಡ್ಯದಲ್ಲಿ ಯಶಸ್ವಿಯಾಗಿ ನಡೆಯಿತು. ಶನಿವಾರ ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಸ್ತೆಯಾತ್ರೆಯು ಬೈಕ್ ರ್ಯಾಲಿಯ ಜತೆ ಸಂಚರಿಸಿ ಜನರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸಾವಿರಾರು ಯುವಕರು ಸ್ವಯಂ ಪ್ರೇರಿತರಾಗಿ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು. ಈ ವೇಳೆ ಜೈ ಭೀಮ್ ಘೋಷಣೆ ಮುಗಿಲು ಮುಟ್ಟಿತ್ತು. ಈ ಸಂದರ್ಭದಲ್ಲಿ ವಕೀಲರು ಮತ್ತು ಬಿಎಸ್‍ಪಿ ಮಂಡ್ಯ ತಾಲ್ಲೂಕು ಅಧ್ಯಕ್ಷರಾದ ಕೆ.ಎಂ.ಅನಿಲ್ ಕುಮಾರ್ ಮಾತನಾಡಿ, ಶನಿವಾರ ರಾತ್ರಿ ಮಂಡ್ಯ ನಗರದಲ್ಲಿ ನಡೆದ ಜೈ ಭೀಮ್ ಜನ ಜಾಗೃತಿ ಜಾಥಾದಲ್ಲಿ ಸಾವಿರಾರು ಯುವಕರು ಭಾಗವಹಿಸಿ ಈ ಭಾಗದಲ್ಲಿ ಹೊಸ ರಾಜಕೀಯ ಭಾಷ್ಯ ಬರೆದಿದ್ದಾರೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ನಮ್ಮ ಜೇಬಿನಲ್ಲಿ ಇದ್ದಾರೆ ಅಂದುಕೊಂಡಿದ್ದ ಕ್ಷೇತ್ರದ ಮುಖಂಡರಿಗೆ ಈ ಜಾಥಾ ನಿದ್ದೆಗೆಡಿಸಿದೆ. ಜಾತ್ಯತೀತವಾಗಿ ಯುವಕರು ಈ ಜಾಥಾದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸುವಿಕೆಯಿಂದ ಇನ್ನು ಮುಂದೆ ಓಟು ಮಾರಾಟಕ್ಕಿಲ್ಲ ಎನ್ನುವುದನ್ನು ಸಾರಿ ಸಾರಿ ಹೇಳಿದೆ. ಬಾಬಾ ಸಾಹೇಬರ ಮಕ್ಕಳಾದ ನಾವುಗಳು ಗುಲಾಮರಲ್ಲ ಸ್ವಾಭಿಮಾನಿಗಳು. ಮುಂದಿನ ಚುನಾವಣೆಯಲ್ಲಿ ಬಾಬಾ ಸಾಹೇಬರ ಅನಿಸಿಕೆಯಂತೆ ಓಟು ಗೆಲ್ಲಬೇಕು, ನೋಟು ಸೋಲಬೇಕು ಎಂದರು. ಮುಂದಿನ ದಿನಗಳಲ್ಲಿ ಸಂವಿಧಾನವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ ವಿಭಿನ್ನ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತೇವೆ ಎಂದರು. ಜಾಥಾ ಕಾರ್ಯಕ್ರಮದಲ್ಲಿ ಕರ್ನಾಟಕ ಉಸ್ತುವಾರಿಗಳಾದ ನಿತಿನ್ ಸಿಂಗ್, ಎಂ.ಗೋಪಿನಾಥ್, ರಾಜ್ಯಾಧ್ಯಕ್ಷರಾದ ಎಂ.ಕೃಷ್ಣ ಮೂರ್ತಿ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
0 ಕಾಮೆಂಟ್‌ಗಳು