ಅಡ್ಡಂಡ ಕಾರ್ಯಪ್ಪ ವಜಾಗೊಳಿಸಿ ಅವರು ಬರೆದ ಕೃತಿ ಮುಟ್ಟುಗೋಲು ಹಾಕಿ ನಾಟಕ ಪ್ರದರ್ಶನ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ

ಮೈಸೂರು : ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬರೆದಿರುವ ಟಿಪ್ಪುವಿನ ನಿಜ ಕನಸುಗಳು ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿ, ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಲಾಯಿತು. 
ಕೃತಿಯು ಸಂಪೂರ್ಣ ಆಧಾರ ರಹಿತ, ಕಪೋಲಕಲ್ಪಿತ ವಿಚಾರಗಳನ್ನು ತಮ್ಮ ಪುಸ್ತಕದಲ್ಲಿ ಬರೆದಿರುವ ಅಡ್ಡಂಡ ಕಾರ್ಯಪ್ಪ ಅವರು, ಸಮಾಜದಲ್ಲಿ ಶಾಂತಿ ಕದಡುತ್ತಾ, ಧರ್ಮಗಳ ನಡುವೆ ಘರ್ಷಣೆ ಉಂಟಾಗುವಂತೆ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ರಂಗಾಯಣದ ನಿರ್ದೇಶಕ ಸ್ಥಾನದಿಂದ ಸರ್ಕಾರ ವಜಾಗೊಳಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು. 

ಪುಸ್ತಕದಲ್ಲಿ ಟಿಪ್ಪು ಸುಲ್ತಾನ್‌ರನ್ನು ಒಂದು ನಿರ್ದಿಷ್ಟ ಧರ್ಮದ ಪ್ರತಿನಿಧಿ ಎಂಬಂತೆ ಬಿಂಬಿಸಿ, ತೇಜೋವಧೆ ಮಾಡಿ ಅವಹೇಳನಕಾರಿಯಾಗಿ ಅಪಪ್ರಚಾರ ಮಾಡಲಾಗಿದೆ. ಅಲ್ಲದೇ, ಆಧಾರ ರಹಿತವಾಗಿ, ಕಪೋಲಕಲ್ಪಿತ ವಿಚಾರಗಳನ್ನು ಬರೆಯಲಾಗಿದೆ. ದೇಶ-ವಿದೇಶಗಳಲ್ಲಿ ಹೆಸರಾಂತ ಸಾಹಿತಿಗಳು ಟಿಪ್ಪುವಿನ ಜೀವನ ಚರಿತ್ರೆ ಬರೆದಿದ್ದಾರೆ. ಇದರ ಬಗ್ಗೆ ಅಡ್ಡಂಡ ಕಾರ್ಯಪ್ಪ ಅಧ್ಯಯನ ಮಾಡಲಿ ಎಂದು ಕಿಡಿಕಾರಿದರು. 
ಟಿಪ್ಪು  ಸುಲ್ತಾನ್ ತನ್ನ ಆಡಳಿತದ ವಿರುದ್ಧ ಸಂಚು ರೂಪಿಸುತಿದ್ದ ಹಿಂದೂ, ಮುಸ್ಲಿಂ, ಕ್ರೆöÊಸ್ತ, ಕೊಡುವ ಸೇರಿದಂತೆ ಎಲ್ಲ ಸಮುದಾಯದ ಜನರನ್ನು ಕಠಿಣವಾಗಿ ಶಿಕ್ಷಿಸಿರಬಹುದು. ತನ್ನ ಸಾಮ್ರಾಜ್ಯ ರಕ್ಷಣೆಯ ಹಿತ ದೃಷ್ಟಿಯಿಂದ ಟಿಪ್ಪು ಹೀಗೆ ನಡೆದುಕೊಂಡಿದ್ದಾರೆ. ಅದರೆ ಪೂರ್ವಗ್ರಹ ಪೀಡಿತರಾದ ಅಡ್ಡಂಡ ಕಾರ್ಯಪ್ಪ ತಮ್ಮ ಕೃತಿಯಲ್ಲಿ ಟಿಪ್ಪು ಮತಾಂಧ, ಅತ್ಯಾಚಾರಿ ಎಂದೆಲ್ಲ ದಾಖಲಿಸಿರುವುದು ದುರುದ್ದೇಶದಿಂದಲ್ಲವೇ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಇತಿಹಾಸ ತಜ್ಞ ಪ್ರೊ..ಪಿ.ವಿ.ನಂಜರಾಜೇ ಅರಸ್, ದಸಂಸ ಸಂಚಾಲಕರಾದ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಕಿರಂಗೂರು ಸ್ವಾಮಿ, ಯಡದೊರೆ ಮಹದೇವಯ್ಯ, ಎಸ್‌ಡಿಪಿಐ ಮುಖಂಡ ಅಮ್ಜದ್ ಖಾನ್, ಜಿಲ್ಲಾಧ್ಯಕ್ಷ ರಫತ್ ಉಲ್ಲಾ ಖಾನ್, ತಬ್ರೇಜ್ ಸೇಠ್ ಮತ್ತಿತರರು ಪಾಲ್ಗೊಂಡಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು