ಮೈಸೂರು : ಶಾಸಕ ತನ್ವೀರ್ ಸೇಠ್ ಅವರಿಗೆ ಕೊಲೆ ಬೆದರಿಕೆ ಹಿನ್ನಲೆ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಮುಖಂಡರು ದೂರು ಸಲ್ಲಿಸಿದ ಬೆನ್ನಲ್ಲೇ, ಉದಯಗಿರಿ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ಮತ್ತೇ ಮೂರು ಪ್ರತ್ಯೇಕ ದೂರು ನೀಡಲಾಯಿತು.
ಮೈಸೂರು ಮಹಾನಗರ ಪಾಲಿಕೆ ಸದಸ್ಯ ಕೆ.ಸಿ.ಶೌಕತ್ ಪಾಷ ತನ್ವೀರ್ ಸೇಠ್ ಅಭಿಮಾನಿಗಳ ಪರವಾಗಿ ದೂರು ಸಲ್ಲಿಸಿದರೆ, ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಹಮಾನ್ ಖಾನ್ ಪಕ್ಷದ ಪರವಾಗಿ ಉದಯಗಿರಿ ಠಾಣೆ ಇನ್ಸ್ಪೆಕ್ಟರ್ ರಾಜು ಅವರಿಗೆ ದೂರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆ.ಸಿ.ಶೌಕತ್ ಪಾಷ ಮಾತನಾಡಿ, ತನ್ವೀರ್ ಸೇಠ್ ಐದು ಬಾರಿ ಶಾಸಕರಾಗಿ ಚುನಾಯಿತರಾದವರು. ಜತೆಗೆ ಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಈ ಭಾಗದ ಅತ್ಯಂತ ಜನಪ್ರಿಯ ನಾಯಕರಾಗಿದ್ದು, ಇಂತಹ ನಾಯಕರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಇದು ಕೋಮು ಸೌಹಾರ್ಧತೆಗೆ ಧಕ್ಕೆ ತರಲು ನಡೆಸುತ್ತಿರುವ ವ್ಯವಸ್ಥಿತ ಹುನ್ನಾರ ಇಂತಹ ಕೋಮುಧ್ವೇಷ ಹುಟ್ಟು ಹಾಕುವಂತಹ ಭಾಷಣ ಮಾಡಿದವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಬಹುದು. ಈ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನವೂ ಇದೆ. ಸಮಾಜದಲ್ಲಿ ಶಾಂತಿ ಭಂಗವನ್ನುಂಟು ಮಾಡುವ ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಹಮಾನ್ ಖಾನ್ ಕೂಡ ಪ್ರತ್ಯೇಕ ದೂರು ಸಲ್ಲಿಸಿ ಮಾತನಾಡಿ, ಶಾಸಕ ತನ್ವೀರ್ ಸೇಠ್ ಅವರಿಗೆ ರಘು ಎಂಬ ವ್ಯಕ್ತಿ ಕೊಲೆ ಬೆದರಿಕೆ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರೂ ಇಲ್ಲಿಯ ತನಕ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಘಟನೆಯಿಂದ ಮುಸ್ಲಿಂ ಸಮುದಾಯಕ್ಕೆ ತೀವ್ರ ನೋವಾಗಿದ್ದು, ಈ ಕೂಡಲೇ ಪೊಲೀಸರು ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ದೂರು ಸ್ವೀಕರಿದ ಇನ್ಸ್ಪೆಕ್ಟರ್ ರಾಜು ಅವರು ಮಾತನಾಡಿ, ಅರ್ಜಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು. ಯಾವುದೇ ಪ್ರಚೋದನೆಗೆ ಒಳಗಾಗದೆ ಸಂಯಮದಿಂದ ಇರಬೇಕೆಂದು ಕೋರಿದರು.
ಮೊಹಮ್ಮದ್ ಯೂನುಸ್, ಅಬ್ರಾರ್ ಮೊಹಮ್ಮದ್, ಖುಷ್ರು, ಕಲೀಂ ಪಾಷ ಇನ್ನಿತರರು ಇದ್ದರು.
ಎಸ್‌ಡಿಪಿಐ ದೂರು :
ಶಾಸಕ ತನ್ವೀರ್ ಸೇಠ್ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆಯನ್ನು ಖಂಡಿಸಿ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ರಫತ್ ಉಲ್ಲಾ ಖಾನ್ ನೇತೃತ್ವದಲ್ಲಿ ಉದಯಗಿರಿ ಠಾಣೆಯಲ್ಲಿ ದೂರು ಸಲ್ಲಿಸಲಾಯಿತು. ಈ ವೇಳೆ ರಫತ್ ಉಲ್ಲಾ ಖಾನ್ ಮಾತನಾಡಿ, ಮುಸ್ಲಿಂ ಸಮುದಾಯದ ವಿರುದ್ಧ ಇಂತಹ ದ್ವೇಷ ಭಾಷಣಗಳು, ಬೆದರಿಕೆಗಳು ನಿರಂತರವಾಗಿ ನಡೆಯುತ್ತಿವೆ. ಯಾರ ವಿರುದ್ಧವೂ ಸರ್ಕಾರ ಕ್ರಮಕ್ಕೆ ಮುಂದಾಗಿಲ್ಲ. ಒಂದು ವೇಳೆ ಮುಸ್ಲಿಂ ಸಮುದಾಯದವರು ಇಂತಹ ಮಾತನ್ನಾಡಿದ್ದಿದ್ದರೇ ಯಾರೂ ದೂರು ನೀಡದಿದ್ದರೂ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿ ಬಂಧಿಸುತ್ತಿದ್ದರು. ಆದರೆ, ಎಲ್ಲವೂ ತದ್ವಿರುದ್ಧ. ಪೊಲೀಸರಿಗೆ ದೂರು ನೀಡಲಾಗಿದೆ. ಕ್ರಮಕ್ಕೆ ಮುಂದಾಗದಿದ್ದರೇ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದರು.ಇಬ್ರಾಹೀಂ ಪಠಾಣ್, ನಜೀಬುಲ್ಲಾ ಖಾನ್ ಇತರರು ಇದ್ದರು.
0 ಕಾಮೆಂಟ್‌ಗಳು