ಬೆಳೆ ಸಾಲ ನಿರಾಕರಣೆ : ಬ್ಯಾಂಕಿನಲ್ಲೇ ವಿಷ ಕುಡಿದಿದ್ದ ರೈತ ಕೊನೆಗೂ ಸಾವು

 

ಮೈಸೂರು : ಬೆಳೆ ಸಾಲ ನಿರಾಕರಿಸಿದ ಹಿನ್ನೆಲೆ ಬ್ಯಾಂಕಿನಲ್ಲೇ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ರೈತರೊಬ್ಬರು ಎರಡು ದಿನಗಳ ಜೀವನ್ಮರಣದ ಹೋರಾಟದ ನಡುವೆ ಕೊನೆಗೂ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಹೆಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಯ ಹೊಸಹೊಳಲು ಗ್ರಾಮದ 73 ವರ್ಷದ ನಿಂಗೇಗೌಡ ಮೃತಪಟ್ಟ ರೈತ.
4 ಎಕರೆ ಜಮೀನು ಹೊಂದಿರುವ ಮೃತ ನಿಂಗೇಗೌಡ ಒಂದು ತಿಂಗಳ ಹಿಂದೆಯೇ ಬೆಳೆ ಸಾಲ ಕೋರಿ ಹೊಸಹೊಳಲು ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನಲ್ಲಿ ಕಬ್ಬಿನ ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. 
ಕಳೆದ ಸೋಮವಾರ ಬ್ಯಾಂಕಿಗೆ ಬಂದ ನಿಂಗೇಗೌಡ ತನ್ನ ಸಾಲದ ಅರ್ಜಿ ಬಗ್ಗೆ ವ್ಯವಸ್ಥಾಪಕರಲ್ಲಿ ವಿಚಾರಣೆ ಮಾಡಿದಾಗ `ಸಿಬಿಲ್ ರೇಟ್ ಕಡಿಮೆ ಇದೆ ನಿಮಗೆ ಸಾಲ ಕೊಡಲು ಆಗುವುದಿಲ್ಲ’ ಎಂದು ಬ್ಯಾಂಕ್ ವ್ಯವಸ್ಥಾಪಕರು ಹೇಳಿದರು ಎನ್ನಲಾಗಿದೆ. ಇದರಿಂದ ಬೇಸತ್ತ ರೈತ ನಿಂಗೇಗೌಡ ಸೋಮವಾರ ಮದ್ಯಾಹ್ನ ಬ್ಯಾಂಕಿನೊಳಗೆ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡರು. 

ನಂತರ ಬ್ಯಾಂಕಿನ ಸಿಬ್ಬಂದಿಗಳು ನಿಂಗೇಗೌಡ ಅವರ ಮಗ ಮಹದೇವ ಎಂಬವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಮಹದೇವ ತನ್ನ ತಂದೆ ನಿಂಗೇಗೌಡರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು.
ಬದುಕಿನುದ್ದಕ್ಕೂ ಹೋರಾಟದಲ್ಲೇ ಬಂದ ರೈತ ನಿಂಗೇಗೌಡ ತನ್ನ ಕೊನೆಯ ಎರಡು ದಿನಗಳ ಕಾಲವೂ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿ ಕೊನೆಗೂ ಇಂದು ಬೆಳಿಗ್ಗೆ ನಿಧನರಾದರು.
ತನ್ನ ತಂದೆಯ ಸಾವಿಗೆ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕರು ನೇರ ಹೊಣೆ ಎಂದು ನಿಂಗೇಗೌಡರ ಮಗ ಮಹದೇವ ನಿನ್ನೆ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೃತ ನಿಂಗೇಗೌಡರ ಶವವನ್ನು ಮೈಸೂರು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಇಲ್ಲಿಯ ತನಕ ಯಾವೊಬ್ಬ ಬ್ಯಾಂಕ್ ಅಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಕೇವಲ ರೈತ ಹೋರಾಟಗಾರರು ಮುಖಂಡರು ಮಾತ್ರ ಆಸ್ಪತ್ರೆಗೆ ಭೇಟಿ ನೀಡಿದ್ದರು ಎಂದು ಮೃತ ನಿಂಗೇಗೌಡರ ಮಗ ಮಹದೇವು ತಿಳಿಸಿದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು