ಅಪಘಾತಕ್ಕೆ ಕಾರಣವಾಗಿದ್ದ ರಸ್ತೆಯ ಗುಂಡಿಯನ್ನು ಸ್ವಂತ ಹಣದಿಂದ ಮುಚ್ಚಿದ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು
ನವೆಂಬರ್ 23, 2022
ಶನಿವಾರಸಂತೆ : ಹಲವಾರು ಅಪಘಾತಗಳಿಗೆ ಕಾರಣವಾಗಿದ್ದ ರಸ್ತೆಯ ಗುಂಡಿಯನ್ನು ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಮ್ಮ ಸ್ವಂತ ಹಣದಲ್ಲಿ ಮುಚ್ಚಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗುಡುಗಳಲೆ ಯಿಂದ ಶನಿವಾರಸಂತೆಗೆ ಹೋಗುವ ಮಾರ್ಗದ ಸೇತುವೆಯ ತಿರುವಿನಲ್ಲಿ ರಸ್ತೆಮಧ್ಯೆ ದೊಡ್ಡ ಗುಂಡಿ ಬಿದ್ದ ಕಾರಣ ಹಲವಾರು ವಾಹನ ಸವಾರರು ಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದರು. ಜತೆಗೆ ಈ ರಸ್ತೆಯಲ್ಲಿ ಸಂಚರಿಸುವ ಪಾದಾಚಾರಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ತೀವ್ರ ಅನಾನುಕೂಲವಾಗಿತ್ತು. ರಸ್ತೆಯ ಗುಂಡಿ ಮುಚ್ಚಿಸುವಂತೆ ಹಲವಾರು ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾರೂ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಹೀಗಾಗಿ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಹಾಗೂ ಕಾರ್ಯಕರ್ತರು ಮಂಗಳವಾರ ರಾತ್ರಿ ಸತತವಾಗಿ 3 ಗಂಟೆಗಳ ಕಾಲ ಕೆಲಸ ಮಾಡಿ ರಸ್ತೆಯ ಗುಂಡಿಯನ್ನು ಮುಚ್ಚಿ ಸಾರ್ವಜನಿಕರ ಪ್ರಸಂಸೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಫ್ರಾನ್ಸಿಸ್ ಡಿಸೋಜಾ, ಅವರು ಮಾತನಾಡಿ, ಗುಂಡಿ ಬಿಂದು 2 ತಿಂಗಳಾದರೂ ಅದನ್ನು ಮುಚ್ಚಿಸಲು ಲೋಕೋಪಯೋಗಿ ಇಲಾಖೆ ಮುಂದಾಗಲಿಲ್ಲ. ಸೇತುವೆಯ ತಿರುವಿನಲ್ಲಿ ಗುಂಡಿ ಇದ್ದ ಕಾರಣ ರಾತ್ರಿ ವೇಳೆ ವಾಹನ ಸವಾರರು ಗುಂಡಿಯನ್ನು ನೋಡದೇ ವೇಗವಾಗಿ ಬಂದು ಬೀಳುತ್ತಿದ್ದರು. ಜತೆಗೆ ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಶಾಲಾ ಮಕ್ಕಳು, ಪಾದಚಾರಿಗಳು ತಿರುಗಾಡುತ್ತಾರೆ. ಎಲ್ಲರಿಗೂ ತುಂಬಾ ಅಡಚಣೆಯಾಗಿತ್ತು. ಸರ್ಕಾರಿ ಅಧಿಕಾರಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ನಾವೇ ಈ ಗುಂಡಿ ಮುಚ್ಚಲು ನಿರ್ಧರಿಸಿದೆವು. ಈ ಕಾಮಗಾರಿಗೆ 3 ಮೂಟೆ ಸಿಮೆಂಟ್, 25 ಕುಕ್ಕೆ ಜಲ್ಲಿ, 30 ಕುಕ್ಕೆ ಎಂ.ಸ್ಯಾಂಡ್ ಬಳಸಿರುತ್ತೇವೆ. ಒಟ್ಟು 6 ಸಾವಿರ ಹಣ ಖರ್ಚಾಗಿದೆ. ಅಬ್ದುಲ್ ಮೇಸ್ತ್ರಿ ಎಂಬವರು 1 ಮೂಟೆ ಸಿಮೆಂಟ್ ಉಚಿತವಾಗಿ ಕೊಡಿಸಿದರು. ಉಳಿದ 2 ಮೂಟೆ ಸಿಮೆಂಟ್ ಮತ್ತು ಜಲ್ಲಿ, ಎಂ.ಸ್ಯಾಂಡ್ ಕಾಮಗಾರಿ ವಸ್ತುಗಳನ್ನು ಕರವೇ ಕಾರ್ಯಕರ್ತರು ಸೇರಿ ಹಣ ಸಂಗ್ರಹಿಸಿ ತಂದಿರುತ್ತಾರೆ. ರಾತ್ರಿ ವೇಳೆ ವಾಹನ ಸಂಚಾರ ಕಡಿಮೆ ಇದ್ದ ಕಾರಣ ಸತತ 3 ಗಂಟೆ ಕೆಲಸ ಮಾಡಿ ಗುಂಡಿಯನ್ನು ಮುಚ್ಚಿದ್ದೇವೆ ಎಂದರು.
ಕರವೇ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ, ಕಾರ್ಯದರ್ಶಿ ರಾಮನಹಳ್ಳಿ ಪ್ರವೀಣ್ ಹಾಗೂ ಗಾರೆ ಕೆಲಸ ಮಾಡಿದಂತಹ ಕರವೇ ಕಾರ್ಯಕರ್ತರುಗಳಾದ ಅರುಣ, ರಾಜಣ್ಣ, ಮಂಜಣ್ಣ, ರಂಜಿತ್, ನಂದಿಗುಂದ ಭರತ್, ಮಂಜು ಇನ್ನಿತರರು ಇದ್ದರು.
0 ಕಾಮೆಂಟ್‌ಗಳು