ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ : ಆರೋಪಿಗೆ 43 ವರ್ಷ ಜೈಲು, 55 ಸಾವಿರ ದಂಡ ವಿಧಿಸಿದ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯ

ಪೋಕ್ಸೋ ಅಪರಾಧದಲ್ಲಿ ಗರಿಷ್ಠ ಶಿಕ್ಷೆ ನೀಡಿದ ಮೊದಲ ಪ್ರಕರಣ

ಮೈಸೂರು : ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ 43 ವರ್ಷ ಜೈಲು ಶಿಕ್ಷೆ ಹಾಗೂ 55 ಸಾವಿರ ರೂ. ದಂಡ ವಿಧಿಸಿ ಮೈಸೂರಿನ ಎಫ್.ಟಿ.ಎಸ್.ಸಿ. ಪೋಕ್ಲೋ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಬಿಹಾರ ಮೂಲದ ನಾಜೀಮ್ 43 ವರ್ಷ ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದಾನೆ.
ಟಿ.ನರಸೀಪುರ ತಾಲ್ಲೂಕು ಹಳೇ ಕೆಂಪಯ್ಯನಹುಂಡಿ ಗ್ರಾಮದಲ್ಲಿರುವ ವಿನೀಶ್ ದರ್ಶನ್ ಫಾರಂನಲ್ಲಿ ಕುದುರೆಗೆ ಲಾಳ ಕಟ್ಟುವ ಕೆಲಸ ಮಾಡುತ್ತಿದ್ದ ನಾಜೀಮ್ ಅದೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ಒಂದು ಕುಟುಂಬಕ್ಕೆ ಸೇರಿದ ಬಾಲಕೀಯ ಮೇಲೆ ಅತ್ಯಾಚಾರ ನಡೆಸಿದ್ದನು ಎಂದು ಆರೋಪಿಸಲಾಗಿತ್ತು.
ಆರೋಪಿ ನಾಜೀಮ್ ಪ್ರತ್ಯೇಕ ರೂಮಿನಲ್ಲಿ ವಾಸವಾಗಿದ್ದನು.


ಒಮ್ಮೆ ನಾಜೀಮನಿಗೆ ನಾಯಿ ಕಚ್ಚಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಾ ರೂಮಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಆ ಸಮಯದಲ್ಲಿ ಸಂತ್ರಸ್ತ ಬಾಲಕಿಯು ನಾಜೀಮನಿಗೆ ಊಟ ತಂದು ಕೊಡುತ್ತಿದ್ದಳು, ಈ ಸಂದರ್ಭ ಬಳಸಿ ನಾಜೀಮನು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದನು.
ಈ ಬಗ್ಗೆ ಬಾಲಕಿ ಕಳೆದ 15-09-2021 ರಂದು ತನ್ನ ತಾಯಿಗೆ ವಿಷಯ ತಿಳಿಸಿದ್ದಳು. ಈ ಕುರಿತು ಮೈಸೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 
ಪ್ರಕರಣದ ವಿಚಾರಣೆಯನ್ನು ನಡೆಸಿದ ಶೀಘ್ರಗತಿ ವಿಶೇಷ ನ್ಯಾಯಾಲಯ-1, ಹೆಚ್ಚುವರಿ ಜಿಲ್ಲಾ ಮತ್ತು
ಸತ್ರ ನ್ಯಾಯಾಧೀಶರಾದ ಶೈಮಾ ಖದ್ರೋಚ್ ಅವರು, ಆರೋಪಿಯ ವಿರುದ್ಧ ಲೈಂಗಿಕ ಅತ್ಯಾಚಾರ, ಜೀವ ಬೆದರಿಕೆ ಮತ್ತು ಹಲ್ಲೆಯ ಆರೋಪ ಸಾಬೀತಾಗಿದೆ ಎಂದು ತಿಳಿಸಿ ಆರೋಪಿಗೆ ಪೋಕ್ಸೋ ಕಾಯಿದೆ ಅಡಿಯಲ್ಲಿ ಒಟ್ಟು 43 ವರ್ಷಗಳ ಕಠಿಣ ಶಿಕ್ಷೆ, ರೂ. 55 ಸಾವಿರ ದಂಡವನ್ನು ವಿಧಿಸಿದ್ದು, ಬಾಲಕಿಗೆ ಬೆದರಿಕೆ ಹಾಕಿದ ಅಪರಾಧಕ್ಕಾಗಿ 6 ತಿಂಗಳ ಸಾದಾ ಸಜೆ ಮತ್ತು 1 ಸಾವಿರ ರೂ. ದಂಡ, ಬಾಲಕಿಗೆ ಕೈಗಳಿಂದ ಹೊಡೆದ ಅಪರಾಧಕ್ಕಾಗಿ 1 ವರ್ಷ ಸಾದಾ ಸಜೆಯ ಶಿಕ್ಷೆ ಮತ್ತು 1 ಸಾವಿರ ರೂ. ದಂಡವನ್ನು ವಿಧಿಸಿ ಶಿಕ್ಷೆಯನ್ನು ನೀಡಿರುತ್ತಾರೆ.
ಅಲ್ಲದೇ ಆರೋಪಿಗೆ ವಿಧಿಸಿರುವ ರೂ.50 ಸಾವಿರ ದಂಡದ ಹಣದಲ್ಲಿ ರೂ. 25 ಸಾವಿರ ನೊಂದ ಬಾಲಕಿಗೆ ಪರಿಹಾರದ ರೂಪದಲ್ಲಿ ಪಾವತಿಸಬೇಕು ಮತ್ತು ಉಳಿದ 25 ಸಾವಿರ ರೂ. ಗಳನ್ನು
ಸರ್ಕಾರಕ್ಕೆ ಜಮಾ ಮಾಡತಕ್ಕದ್ದು ಎಂದು ಆದೇಶಿಸಿದ್ದಾರೆ. ಜತೆಗೆ  ಬಾಲಕಿಯು ರೂ.7 ಲಕ್ಷ ಪರಿಹಾರಕ್ಕೆ ಅರ್ಹಳು ಎಂದು ನ್ಯಾಯಾಲಯ ಆದೇಶಿಸದೆ.
ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಬಿ. ಜಯಂತಿ ಅಭಿಯೋಗದ ಪರವಾಗಿ ಹಾಜರಾಗಿ ವಾದ ಮಂಡಿಸಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು