ಕೇಂದ್ರ ಗುಪ್ತಾಚಾರ ಇಲಾಖೆ ನಿವೃತ್ತ ಅಧಿಕಾರಿ ಕೊಲೆ ಪ್ರಕರಣ : ಮೂರೇ ದಿನದಲ್ಲಿ ಕೊಲೆಗಡುಕನ ಹೆಡೆಮುರಿ ಕಟ್ಟಿದ ಮೈಸೂರು ಪೊಲೀಸರು

ಭೂ ವಿವಾದವೇ ಕುಲಕರ್ಣಿ ಹತ್ಯೆಗೆ ಕಾರಣ 

ಮೈಸೂರು : ನಿವೃತ್ತರ ಸ್ವರ್ಗ ಎಂದೇ ಖ್ಯಾತವಾಗಿದ್ದ ಮೈಸೂರನ್ನು ಬೆಚ್ಚಿ ಬೀಳಿಸಿದ ಕೇಂದ್ರ ಗುಪ್ತಾಚಾರ ಇಲಾಖೆ ನಿವೃತ್ತ ಅಧಿಕಾರಿಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದು, ಮೂರೇ ದಿನದಲ್ಲಿ ಕೊಲೆಗಡುಕನಿಗೆ ಕೋಳ ಹಾಕಿದ್ದಾರೆ.
ಮೃತ ಕುಲಕರ್ಣಿಯವರ ಪಕ್ಕದ ಮನೆಯ ಮಾದಪ್ಪ ಎಂಬವರ ಪುತ್ರ ಮನು (30) ಬಂಧಿತ ಆರೋಪಿ ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಈತನ ಬೇಟೆಗೆ ಪೊಲೀಸರು ಗಾಳ ಹಾಕಿದ್ದಾರೆ.
ಭೂ ವಿವಾದಕ್ಕೆ ಸಂಬಂಧಿಸಿದಂತೆ ಮೃತ ಆರ್.ಎನ್.ಕುಲಕರ್ಣಿ ಮತ್ತು ಮಾದಪ್ಪ ಎಂಬವರ ನಡುವೆ ಗಲಾಟೆಯಾಗಿತ್ತು. ಈ ಕಾರಣದಿಂದ ಮಾದಪ್ಪನ ಪುತ್ರ ಮನು ತನ್ನ ಗೆಳೆಯನೊಂದಿಗೆ ಸೇರಿ ಈ ಕೊಲೆಯ ಸಂಚು ರೂಪಿಸಿದ್ದನು ಎಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ಮನು ಮತ್ತು ತನ್ನ ಗೆಳಯನಿಗೆ ಆರ್.ಎನ್ ಕುಲಕರ್ಣಿ ವಾಯುವಿಹಾರಕ್ಕೆ ಬರುತ್ತಿದ್ದ ಸ್ಥಳಗಳನ್ನು ದ್ವಿ ಚಕ್ರವಾಹನದಲ್ಲಿ ಕರೆತಂದು ತೋರಿಸಿದ್ದನು. ಇಬ್ಬರೂ ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದರು. ಮನು ತನ್ನ ತಂದೆ ಮಾದಪ್ಪನಿಗೂ ವಿಚಾರ ತಿಳಿಸದೇ ಹಿಟ್ ಅಂಡ್ ರನ್ ನಂತೆ ಬಿಂಬಿಸಿ ಕೊಲೆ ಮಾಡಿದ್ದನು. ಈ ಪ್ರಕಟಣದಲ್ಲಿ ಹಲವು ರೀತಿಯ ಅನುಮಾನ ಹುಟ್ಟಿಕೊಂಡರೂ ಕೊನೆಗೆ ಪಕ್ಕದ ಮನೆಯವರೆ ಕೊಲೆ ಮಾಡಿರುವುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ನವೆಂಬರ್ 4ರ ಶುಕ್ರವಾರ ಸಂಜೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಅಪರಿಚಿತ ವಾಹನದಿಂದ ಡಿಕ್ಕಿ ಹೊಡೆಸಿ ಕುಲಕರ್ಣಿ ಹತ್ಯೆಗೈಯ್ಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಘಟನೆಯ ಸಿಸಿ ಕ್ಯಾಮೆರಾ ಫುಟೇಜ್ ಪರಿಶೀಲಿಸದಾಗ ಅದೊಂದು ಉದ್ದೇಶ ಪೂರ್ವಕ ಘಟನೆ ಎಂಬುದು ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಎಸಿಪಿ ಶಿವಶಂಕರ ನೇತೃತ್ವದ ನಾಲ್ಕು ತಂಡದಲ್ಲಿ 50 ಮಂದಿ ತನಿಖಾಧಿಕಾರಿಗಳನ್ನು ನಿಯೋಜಿಸಲಾಗಿತ್ತು.