ಬ್ರಿಟೀಷರನ್ನು ಭಾರತದಿಂದ ಓಡಿಸಿ ಸಮಾನತೆಯ ನಾಡು ಕಟ್ಟುವುದು ಟಿಪ್ಪುವಿನ ನಿಜವಾದ ಕನಸಾಗಿತ್ತು : ಎಸ್.ರಾಜೇಶ್
ನವೆಂಬರ್ 16, 2022
ಮೈಸೂರು : ಬ್ರಿಟೀಷರನ್ನು ಭಾರತದಿಂದ ಓಡಿಸುವುದು. ಪಾನಮುಕ್ತ ರಾಜ್ಯದ ನಿರ್ಮಾಣ ಹಾಗೂ ಸಮಾನತೆಯ ನಾಡು ಕಟ್ಟುವುದು ಟಿಪ್ಪುವಿನ ನಿಜವಾದ ಕನಸಾಗಿತ್ತು, ಅಡ್ಡಂಡ ಕಾರ್ಯಪ್ಪ ಬರೆದ ಕೃತಿ ಆರ್‍ಎಸ್‍ಎಸ್ ಮತ್ತು ಬಿಜೆಪಿಯ ನಿಜವಾದ ಕನಸುಗಳು ಎಂದು ದಲಿತ ಮಹಾ ಸಭಾ ಅಧ್ಯಕ್ಷ ಎಸ್.ರಾಜೇಶ್ ಹೇಳಿದರು. ಜಿಲ್ಲಾ ಪತ್ರರ್ಕರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಟಿಪ್ಪು ಕುರಿತ ನಾಟಕವನ್ನು ದುರುದ್ದೇಶದಿಂದ ರಚಿಸಿದ್ದು, ರಾಜ್ಯದಲ್ಲಿ ಅಶಾಂತಿಯನ್ನುಂಟು ಮಾಡಲು ಕಾರಣರಾಗಿದ್ದಾರೆ. ಕೂಡಲೇ ಈ ಕೃತಿಯನ್ನು ಹಿಂಪಡೆದು ನಾಟಕ ಪ್ರದರ್ಶನ ರದ್ದುಗೊಳಿಸಬೇಕು ಇಲ್ಲದಿದ್ದಲ್ಲಿ ನಾಟಕ ಪ್ರದರ್ಶನದ ವೇಳೆ ಕಲಾಮಂದಿರಕ್ಕೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿದರು. ಟಿಪ್ಪು ಸಮಾನತೆ, ಮಹಿಳಾ ಸ್ವಾತಂತ್ರ್ಯ, ಸರ್ವರಿಗೂ ಸಮಾನ ಬದುಕು ನೀಡಿದ ಸಾಮಾಜಿಕ ಸಮಾನತೆಯ ಪ್ರತಿಪಾದಕನಾಗಿದ್ದನು ಎಂದ ಅವರು, ಕೇರಳ ರಾಜ್ಯದಲ್ಲಿ ಜಾರಿಯಲ್ಲಿದ್ದ ದಲಿತ ಮಹಿಳೆಯರ ಸ್ತನ ತೆರಿಗೆ ರದ್ದು ಮಾಡಿದ ಮಹಾನ್ ಮಾನವತಾವಾದಿ ಎಂದರು. ಅಲ್ಲದೆ, ಶಾಸಕ ತನ್ವೀರ್‍ಸೇಠ್ ತಿಳಿಸಿದರಂತೆ ನಗರದಲ್ಲಿ ಟಿಪ್ಪುವಿನ 100 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ತಮ್ಮ ಬೆಂಬಲವಿದೆ ಎಂದರು. ಇದೇವೇಳೆ ಸಂಸದ ಪ್ರತಾಪ್‍ಸಿಂಹ ಅವರು ಗುಂಬಜ್ ಮಾದರಿಯ ಬಸ್ ನಿಲ್ದಾಣ ಕೆಡವಲು ಗಡುವು ನೀಡಿರುವುದನ್ನು ವಿರೋಧಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ಸೈಯದ್ ಇಕ್ಬಾಲ್ ಮಾತನಾಡಿ, ಬಿಜೆಪಿ ಮುಖಂಡರು ಪದೇ ಪದೇ ಹಿಂದೂ ಮುಸ್ಲಿಂ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಟಿಪ್ಪು ಕುರಿತ ಸುಳ್ಳು ಕತೆಗಳು ಯಾರೂ ಒಪ್ಪುವುದಿಲ್ಲ. ಕೇವಲ ಮತಗಳಿಕೆಗಾಗಿ ಸುಖಾ ಸುಮ್ಮನೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿ ಅಮಾಯಕರನ್ನು ಬಲಿಕೊಡಬೇಡಿ ಈ ಬಗ್ಗೆ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದರು. ಟಿಪ್ಪು ಸುಲ್ತಾನರ 100 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ನಮ್ಮ ನಾಯಕರ ತೀರ್ಮಾನವೇ ಅಂತಿಮ. ನಮ್ಮದೇ ಜಾಗ, ನಮ್ಮದೇ ಹಣದಲ್ಲಿ ನಾವು ಪ್ರತಿಮೆ ನಿರ್ಮಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಸೂಲ್ ಮಾತನಾಡಿ, ಮೈಸೂರಿನಲ್ಲಿ ಟಿಪ್ಪು ಸುಲ್ತಾನರ ಪ್ರತಿಮೆ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ. ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಪ್ರತಿಮೆ ಒಡೆಯುವ ಬಗ್ಗೆ ಮಾತನಾಡಿ ಮತ್ತೆ ಶಾಂತಿ ಭಂಗಕ್ಕೆ ಕಾರಣರಾಗಿದ್ದಾರೆ. ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇನ್ನು ಜೆಎಸ್‍ಎಸ್ ಕಾಲೇಜು ಮುಂಭಾಗದ ಬಸ್ ನಿಲ್ದಾಣ ಒಡೆಯುವುದಾಗಿ ಪ್ರತಾಪ್ ಸಿಂಹ ಹೇಳುತ್ತಾರೆ. ಇದು ಜನರ ತೆರಿಗೆ ಹಣದಲ್ಲಿ ಕಟ್ಟಿದ ಬಸ್ ನಿಲ್ದಾಣ. ಕಟ್ಟುವಾಗ ನೀವು ಏನು ಮಾಡುತಿದ್ದೀರಿ ಒಡೆಯುವುದನ್ನು ಬಿಡಿ ಕಟ್ಟುವ ಕೆಲಸ ಮಾಡಿ ಎಂದರು.
ಸೈಯದ್ ಫಾರೂಕ್, ರಾಮಕೃಷ್ಣ, ಇರ್ಫಾನ್ ಅನ್ನುಭಾಯ್, ಶೌಕತ್ ಪಾಷ ಮೊದಲಾದವರು ಇದ್ದರು.
0 ಕಾಮೆಂಟ್‌ಗಳು