ಪಾಂಡವಪುರ ಪುರಸಭೆ ಆಸ್ತಿ ಖಾಸಗಿ ವ್ಯಕ್ತಿಗಳಿಂದ ಕಬಳಿಕೆ : ಅಧಿಕಾರಿಗಳು, ಪುರಸಭೆ ಪದಾಧಿಕಾರಿಗಳು ಮೌನ ; ಆರೋಪ
ನವೆಂಬರ್ 03, 2022
ವರದಿ: ಎನ್.ಕೃಷ್ಣೇಗೌಡ ಪಾಂಡವಪುರ.
ಪಾಂಡವಪುರ: ಪುರಸಭೆಗೆ ಸೇರಿದ ಆಸ್ತಿಯನ್ನು ಕೆಲವರು ಅಕ್ರಮವಾಗಿ ಕಬಳಿಸಿ ಅಂಗಡಿ, ಮುಂಗಟ್ಟುಗಳನ್ನು ಮಾಡಿಕೊಂಡು ಸರ್ಕಾರಕ್ಕೆ ಕೋಟ್ಯಾಂತರ ರೂ. ನಷ್ಟವನ್ನುಂಟು ಮಾಡಿದ್ದರೂ ಪುರಸಭೆ ಮುಖ್ಯಾಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ಪಿ.ಎಸ್.ಜಗದೀಶ್ ಆರೋಪಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪಟ್ಟಣದ ನಿರ್ಮಲ ಪಾಠಶಾಲೆಯಿಂದ ಡಾ.ರಾಜ್‍ಕುಮಾರ್ ವೃತ್ತದವರೆಗೂ ಪುರಸಭೆ ಖಾತೆ ನಂಬರ್ 1193ರಲ್ಲಿ ಪೂರ್ವ-ಪಶ್ಚಿಮ 400 ಅಡಿ ಉತ್ತರ-ದಕ್ಷಿಣ 10 ಅಡಿವುಳ್ಳ ಜಾಗವು ಪುರಸಭಾ ಆಸ್ತಿಯಾಗಿದೆ. ಈ ಆಸ್ತಿಗೆ ಹೊಂದಿಕೊಂಡಂತೆ ಪಾಂಡವಪುರ ನಿವಾಸಿ ದಿ.ಕುಂಟೆಗೌಡ ಮತ್ತು ಇವರ ವಾರಸುದಾರರ ಆಸ್ತಿಯಾಗಿರುತ್ತದೆ. ಪುರಸಭೆ ಆಸ್ತಿ ಕುಂಟೇಗೌಡರ ಆಸ್ತಿಯು ಪ್ರತ್ಯೇಕವಾಗಿದ್ದು, ಪುರಸಭೆ ಆಸ್ತಿಯ ವಿಚಾರವಾಗಿ ಕುಂಟೇಗೌಡ ಮತ್ತು ಅವರ ವಾರಸುದಾರರು ಪುರಸಭಾ ಆಸ್ತಿಯು ನಮಗೆ ಸೇರಬೇಕೆಂದು ಕಬಳಿಸಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಿದರು. ಆಸ್ತಿ ವಿಚಾರವಾಗಿ ಬೆಂಗಳೂರು ಹೈಕೋರ್ಟ್‍ನಲ್ಲಿ ಡಬ್ಲ್ಯೂಪಿ ನಂ. 3727 ಮತ್ತು ಡಬ್ಲ್ಯೂಪಿ ನಂ.3728/2012ರಲ್ಲಿ ಪುರಸಭೆಯ ಪರವಾಗಿ ಕೋರ್ಟ್ ಆದೇಶ ನೀಡಿರುತ್ತದೆ. ಈ ಹಿಂದೆ ಪುರಸಭಾ ಅಧ್ಯಕ್ಷರಾಗಿದ್ದ ಹಾರೋಹಳ್ಳಿ ಸಿದ್ದೇಗೌಡರವರ ನೇತೃತ್ವದಲ್ಲಿ 2013ನೇ ಸಾಲಿನಲ್ಲಿ ಉಪವಿಭಾಗಾಧಿಕಾರಿಯಾದ ಜಿ.ಪ್ರಭುರವರು, ಮತ್ತು ಮಂಡ್ಯ ಜಿಲ್ಲಾಧಿಕಾರಿಗಳಾದ ಪಿ.ಸಿ.ಜಾಫರ್ ರವರು, ಮತ್ತು ಮಂಡ್ಯ ಜಿಲ್ಲಾ ಎಸ್‍ಪಿ ಶೈಲೇಂದ್ರ ಕುಮಾರ್ ರವರು, ಮತ್ತು ಡಿ.ಡಿ.ರಾಜಣ್ಣರವರ ನೇತೃತ್ವದಲ್ಲಿ ಈ ಆಸ್ತಿಯನ್ನು ಸ್ಥಳ ತನಿಖೆ ಮಾಡಿ ಪುರಸಭಾ ಆಸ್ತಿಗೆ ತಂತಿ ಬೇಲಿಯನ್ನು ಹಾಕಿಸಿ, ಪುರಸಭೆಗೆ ಆಸ್ತಿಯನ್ನು ಹಸ್ತಾಂತರ ಮಾಡಿದರು. ಆಗಿನಿಂದಲೂ ಸದರಿ ಆಸ್ತಿಯು ಪಾಂಡವಪುರ ಪುರಸಭೆಯ ಅಧೀನದಲ್ಲೇ ಇರುತ್ತದೆ. ಈ ಮಧ್ಯೆ ಕುಂಟೇಗೌಡ ಮತ್ತು ವಾರಸುದಾರರು ಪುರಸಭೆ ಆಸ್ತಿಗೆ ಹೊಂದಿಕೊಂಡಂತೆ ಇದ್ದ ತಮ್ಮ ಆಸ್ತಿಯನ್ನು ಕೆಲವು ಬಲಾಡ್ಯ ಖಾಸಗಿಯವರಿಗೆ ಮಾರಾಟ ಮಾಡಿದ್ದು, ಈ ಬಲಾಡ್ಯರು ಪುರಸಭೆ ಆಸ್ತಿಯ ತಂತಿ ಬೇಲಿಯನ್ನು ರಾತ್ರೋರಾತ್ರಿ ತೆರವುಗೊಳಿಸಿ, ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪುರಸಭೆಯ ಹಿಂದಿನ ಮುಖ್ಯಾಧಿಕಾರಿಗಳಾದ ಕೆಂಪದಾಸಯ್ಯ, ಕರಿಬಸಯ್ಯ, ಎಸ್.ಡಿ.ಮಂಜುನಾಥ್ ಅವರಾಗಲೀ ಅಥವಾ ಸದಸ್ಯರಾಗಲೀ, ಈ ಆಸ್ತಿ ಉಳಿವಿನ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ. ಈ ಪುರಸಭೆ ಆಸ್ತಿಯು ಈಗಿನ ಮಾರುಕಟ್ಟೆ ಬೆಲೆ ಕೋಟಿಗಟ್ಟಲೇ ಬೆಲೆಬಾಳುವ ಆಸ್ತಿಯಾಗಿರುತ್ತದೆ. ಈ ಜಾಗದಲ್ಲಿ ಪುರಸಭೆಯಿಂದ ಮಳಿಗೆಗಳನ್ನು ನಿರ್ಮಿಸಿದರೆ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸಲು ಅನುಕೂಲವಾಗಿರುತ್ತದೆ. ಬಾಡಿಗೆ ಹಣದಿಂದ ಪುರಸಭೆ ನಾಗರಿಕರಿಗೆ ಮೂಲ ಸೌಕರ್ಯವನ್ನು ಒದಗಿಸಬಹುದಾಗಿರುತ್ತದೆ ಎಂದರು. ತಾಲ್ಲೂಕು ಆಡಳಿತ, ಜಿಲ್ಲಾಡಳಿತ, ಪುರಸಭೆಯವರು ಈ ಕೂಡಲೇ ಪುರಸಭಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಕೋಟಿಗಟ್ಟಲೇ ಬೆಲೆಬಾಳುವ ಆಸ್ತಿಯನ್ನು ರಕ್ಷಣೆ ಮಾಡಬೇಕು. ಇಲ್ಲವಾದರೆ ಪಾಂಡವಪುರ ನಾಗರೀಕ ವ್ಯಕ್ತಿಗಳ ಜೊತೆಗೂಡಿ ಜಿಲ್ಲಾಧಿಕಾರಿಯವರ ಕಛೇರಿ ಮುಂದೆ ಉಪವಾಸ ಸತ್ಯಾಗ್ರಹವನ್ನು ಮಾಡಬೇಕಾಗುತ್ತದೆ ಎಂದು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
0 ಕಾಮೆಂಟ್‌ಗಳು