ಸಚಿವ ಎಸ್.ಟಿ.ಸೋಮಶೇಖರ್‍ಗೆ ಅಲೆಮಾರಿಗಳ ಘೇರಾವ್ : ದಿಢೀರ್ ಪ್ರತಿಭಟನೆಗೆ ಬೆಚ್ಚಿ ಸ್ಥಳದಿಂದ ಹೊರಟ ಸಚಿವರು

ಮಕ್ಕಳು, ಮಹಿಳೆಯರೂ ಸೇರಿ ನೂರಾರು ಅಲೆಮಾರಿಗಳ ಬಂಧನ

ಮೈಸೂರು : ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ದಿಢೀರನೇ ಮುತ್ತಿಗೆ ಹಾಕಿದ ಅಲೆಮಾರಿಗಳು ನಿವೇಶನದ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಧಿಕ್ಕಾರ ಕೂಗಿದ ಕಾರಣ ತಬ್ಬಿಬ್ಬಾದ ಸಚಿವರು ಕಾರಿನಿಂದ ಇಳಿಯದೇ ಸ್ಥಳದಿಂದ ಹೊರಟ ಘಟನೆ ನಡೆಯಿತು.  
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಜಿಲ್ಲಾಡಳಿತ ಏರ್ಪಡಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಈ ಘಟನೆ ನಡೆದಿದ್ದು, ಕಳೆದ 50 ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿವೇಶನದ ಹಕ್ಕು ಪತ್ರಕ್ಕಾಗಿ ಧರಣಿ ನಡೆಸುತ್ತಿದ್ದ ಅಲೆಮಾರಿಗಳು ಇಂದು ದಿಢೀರನೇ ಸಚಿವರನ್ನು ಮುತ್ತಿಗೆ ಹಾಕಿದ್ದರಿಂದ ಜಿಲ್ಲಾಡಳಿತ ಮತ್ತು ಪೊಲೀಸರೆ ತಬ್ಬಿಬ್ಬಾದರು.

ಸಚಿವರು ಕನ್ನಡ ಬಾವುಟ ಧ್ವಜಾರೋಹಣ ನೆರವೇರಿಸಿ ವೇದಿಕೆ ಯಲ್ಲಿ ಕನ್ನಡ ಹೋರಾಟಗಾರರಿಗೆ ಸನ್ಮಾನ ಮಾಡಿ ನಂತರ ಭುವನೇಶ್ವರಿ ಭಾವಚಿತ್ರದ ವಾಹನಕ್ಕೆ ಚಾಲನೆ ನೀಡಿ ಭಾರತಾಂಭೆ ರಥದ ವಾಹನಕ್ಕೆ ಚಾಲನೆ ನೀಡಲು ಆಗಮಿಸುತ್ತಿದ್ದಂತೆ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಅವರ ನೇತೃತ್ವದಲ್ಲಿ ಅಲ್ಲಲ್ಲಿ ಜನರ ಮಧ್ಯೆ ಗುಪ್ತವಾಗಿ ನಿಂತಿದ್ದ ಅಲೆಮಾರಿ ಸಮುದಾಯದ ಹೆಂಗಸರು, ಮಕ್ಕಳು, ಯುವಕರು ದಿಢೀರನೇ  ಸಚಿವರನ್ನು ಮುತ್ತಿಗೆ ಹಾಕಿದರು. ಇದರಿಂದ ಸಚಿವರು  ಬೆಚ್ಚಿಬಿದ್ದರು. ತಕ್ಷಣ ಪೊಲೀಸರು ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಸುತ್ತುವರೆದರು. ಗೊಂದಲಕ್ಕೊಳಗಾದ ಸಚಿವರು ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿ ಅಲ್ಲಿಂದ ಹೊರಟೇ ಹೋದರು.

ಈ ವೇಳೆ ಪೊಲೀಸರು ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಅವರನ್ನು ವಶಕ್ಕೆ ಪಡೆದು ಪೊಲೀಸ್ ಜೀಪಿನಲ್ಲಿ ಕೂರಿಸಿಕೊಂಡು ಪೊಲೀಸ್ ಠಾಣೆಯತ್ತ ಕರೆದೊಯ್ಯಲು ಮುಂದಾದರು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಅಲೆಮಾರಿ ಹೆಂಗಸರು, ಮಕ್ಕಳು ಮತ್ತು ಯುವಕರು ಜೀಪಿನ ಹಿಂದೆಯೇ ಓಡಿಹೋಗಿ ನಗರ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ  ಮುಂದೆ ಜೀಪಿಗೆ ಅಡ್ಡಲಾಗಿ ಮಲಗಿದರು. ಇದರಿಂದ ಆತಂಕಕ್ಕೊಳಗಾದ ಪೊಲೀಸರು ದಲಿತ ಮುಖಂಡ ಚೋರನಹಳ್ಳಿ ಶಿವಣ್ಣ ಅವರನ್ನು ಜೀಪಿನಿಂದ ಕೆಳಗಿಳಿಸಿದರು. ಬಳಿಕ ರಸ್ತೆಯಲ್ಲೇ ಕುಳಿತ ಅಲೆಮಾರಿಗಳು ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ಧಿಕ್ಕಾರ ಕೂಗಿದರು.

ಇದೇ ವೇಳೆ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ನಾವು ಕನ್ನಡ ರಾಜ್ಯೋತ್ಸವಕ್ಕೆ ಅಡ್ಡಿಪಡಿಸಲು ಬಂದಿಲ್ಲ, ನಾವು ಕನ್ನಡಿಗರು, ಕನ್ನಡ ಓದುವವರು ಕಳೆದ 50 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿವೇಶನದ ಹಕ್ಕು ಪತ್ರ ನೀಡುವಂತೆ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇದೂವರೆಗೂ ಬಂದು ನಮ್ಮ ಸಮಸ್ಯೆ ಕೇಳಲಿಲ್ಲ, ದಸರಾ ಸಮಯದಲ್ಲೇ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ ಜಿಲ್ಲಾಧಿಕಾರಿಗಳು ಪೊಲೀಸ್ ಆಯುಕ್ತರು ದಸರಾ ನಂತರ ನಿಮ್ಮ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು ಹಾಗಾಗಿ ನಾವುಗಳು ಸುಮ್ಮನಿದ್ದೆವು. ದಸರಾ ಮುಗಿದು ತಿಂಗಳು ಕಳೆದರೂ ನಮ್ಮ ಸಮಸ್ಯೆ ಕೇಳಲು ಯಾರೂ ಬಂದಿಲ್ಲ, ಹಾಗಾಗಿ ಈ ಅಸಮರ್ಥ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗೆ ಮುತ್ತಿಗೆ ಹಾಕಿದ್ದೇವೆ. ನಮ್ಮ ಸಮಸ್ಯೆ ಈಗಲೂ ಬಗೆಹರಿಯದಿದ್ದರೆ ಮುಂದೆ ಯಾವ ರೀತಿ ಹೋರಾಟ ಮಾಡುತ್ತೇವೊ ನಮಗೆ ಗೊತ್ತಿಲ್ಲ, ಮುಂದೆ ಆಗಬಹುದಾದ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಸಿದರು.
ಇದಾದ ನಂತರ ಪೊಲೀಸರು ಮೂರು ವಾಹನಗಳನ್ನು ತಂದು ಪ್ರತಿಭಟನಾಕಾರರನ್ನು ಬಂಧಿಸಿದರು. ಈ ವೇಳೆ ಸಣ್ಣ ಸಣ್ಣ ಮಕ್ಕಳನ್ನು ಕಂಕಳುಲ್ಲಿ ಎತ್ತಿಕೊಂಡಿದ್ದ ಮಹಿಳೆಯರನ್ನು ಮಕ್ಕಳನ್ನೂ ಬಿಡದೆ ಪೊಲೀಸ್ ವಾಹನಕ್ಕೆ ಪೊಲೀಸರು ತುಂಬಿ ಕರೆದೊಯ್ದರು.
ಈ ವೇಳೆ ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡಿದ್ದ ತಾಯಂದಿರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಕಂಡ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ಮೈಸೂರು ನಗರದ ಹೊರವಲಯದ ಏಕಲವ್ಯ ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ವಾಸಮಾಡುತ್ತಿರುವ ಅಲೆಮಾರಿಗಳು ತಮ್ಮ ನಿವೇಶನದ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಕಳೆದ 50 ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಇಂದು ಜಿಲ್ಲಾ ಸಚಿವರು ಕನ್ನಡ ರಾಜ್ಯೋತ್ಸವ ಆಚರಣೆಗೆ ಬರುತ್ತಿರುವುದನ್ನು ಅರಿತು ಯಾರಿಗೂ ಮಾಹಿತಿ ನೀಡದೆ ದಿಢೀರನೆ ಸಚಿವರನ್ನು ಮುತ್ತಿಗೆ ಹಾಕಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಭಾಗ್ಯಮ್ಮ, ಕಿರಂಗೂರು ಸ್ವಾಮಿ, ಶಿವರಾಜು ಅರಸಿನಕೆರೆ, ಮಹದೇವ, ಅನಿತ, ರಂಗಸ್ವಾಮಿ, ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು