ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಮುಂದುವರಿದರೆ ಮಾತ್ರ ಬಾಬಾ ಸಾಹೇಬರ ಕನಸು ನನಸಾಗಲು ಸಾಧ್ಯ : ಸಿ.ಎಸ್.ಪುಟ್ಟರಾಜು
ನವೆಂಬರ್ 25, 2022
ಪಾಂಡವಪುರ : ವಿದ್ಯಾರ್ಥಿ ನಿಯಲದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಹೆಣ್ಣು ಮಕ್ಕಳು ಅತ್ಯುತ್ತಮವಾಗಿ ಶಿಕ್ಷಣ ಪಡೆದು ಸಾಧನೆ ಮಾಡಿದರೆ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ನನಸು ಮಾಡಲು ಸಾಧ್ಯ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಸಲಹೆ ನೀಡಿದರು. ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕವಾಗಿ ನಮ್ಮ ತಾಲ್ಲೂಕನ್ನು ಅಭಿವೃದ್ಧಿ ಪಡಿಸಲು ಹೋಬಳಿಗೆ ಎರಡರಂತೆ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಿಸಿದ್ದೇನೆ. ಎಲ್ಲವೂ ಅತ್ಯುತ್ತಮವಾಗಿ ನಡೆಯುತ್ತಿವೆ. ಈ ವಿದ್ಯಾರ್ಥಿನಿಲಯವನ್ನೂ ಸುಮಾರು 2.5 ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಲಾಗಿದೆ. ಈಗಾಗಲೇ ಹಾಸ್ಟೇಲ್‍ಗೆ ಕಾಂಕ್ರಿಟ್ ರಸ್ತೆ ನಿರ್ಮಿಸಲು ಪುರಸಭೆ ಎಂಜಿನಿಯರ್‍ಗೆ ತಿಳಿಸಲಾಗಿದೆ. ನಿಲಯದ ಮೇಲ್ವಿಚಾರಕರೂ ಸಹ ವಿದ್ಯಾರ್ಥಿನಿಯರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಜಾಗ್ರತೆ ವಹಿಸಿ ನಿರ್ವಹಣೆ ಮಾಡಬೇಕು. ಯಾವುದೇ ಸಮಸ್ಯೆ ಉಂಟಾದರೂ ತಕ್ಷಣ ನನಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ತಾಪಂ ಇಒ ಎಸ್.ಎಂ.ಲೋಕೇಶ್ ಮೂರ್ತಿ ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿ ಹೆಣ್ಣು ಮಕ್ಕಳ ಹಾಸ್ಟೇಲ್ ಇರುವ ಕಾರಣ ಯಾವುದೇ ಸಮಸ್ಯೆ ಇರುವುದಿಲ್ಲ. ಆದಾಗ್ಯೂ ಹೆಣ್ಣು ಮಕ್ಕಳು ಜಾಗ್ರತೆಯಾಗಿ ತಮ್ಮ ವ್ಯಾಸಂಗ ಮಾಡಿಕೊಂಡು ಶಾಲೆಗೆ, ಊರಿಗೆ, ತಾಲ್ಲೂಕಿಗೆ ಕೀರ್ತಿ ತರಬೇಕು ಎಂದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಎಸ್.ರಾಘವೇಂದ್ರ, ಪುರಸಭೆ ಸದಸ್ಯರಾದ ಶಿವಣ್ಣ, ರಾಮು, ಜಯಲಕ್ಷ್ಮಮ್ಮ, ಉಮಾಶಂಕರ್, ಮುಖಂಡರಾದ ಕನಗನಮರಡಿ ಬೊಮ್ಮರಾಜು, ಡಿ.ಕೆ.ಅಂಕಯ್ಯ, ಕಣಿವೆ ಯೋಗೇಶ್, ಎಂಜಿನಿಯರ್ ಚೌಡಪ್ಪ ಇನ್ನಿತರರು ಇದ್ದರು.
0 ಕಾಮೆಂಟ್‌ಗಳು