ವಾರದೊಳಗೆ ಬಸ್ ನಿಲ್ದಾಣ ತೆರವಿಗೆ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾದಿಂದ ಪಾಲಿಕೆ, ಕೆಆರ್‍ಐಡಿಎಲ್ ಗೆ ನೋಟೀಸ್ ಜಾರಿ
ನವೆಂಬರ್ 16, 2022
ಮೈಸೂರು : ನಗರದ ಜೆಎಸ್‍ಎಸ್ ಕಾಲೇಜು ಮುಂಭಾಗ ನಂಜನಗೂಡು ರಸ್ತೆಯಲ್ಲಿ ನಿರ್ಮಿಸುತ್ತಿರುವ ನೂತನ ಬಸ್ ನಿಲ್ದಾಣವನ್ನು ಒಂದು ವಾರದೊಳಗೆ ತೆರವು ಮಾಡುವಂತೆ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾದಿಂದ ಪಾಲಿಕೆ ಆಯುಕ್ತರು ಮತ್ತು ಕೆಆರ್‍ಐಡಿಎಲ್ ಎಂಜಿನಿಯರ್ ಗೆ ನೋಟೀಸ್ ಜಾರಿ ಮಾಡಲಾಗಿದೆ. ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಸುಮಾರು 10 ಲಕ್ಷ ರೂ. ಅನುದಾನ ನೀಡಿ ಈ ನೂತನ ಬಸ್ ನಿಲ್ದಾಣ ನಿರ್ಮಿಸಿದ್ದರು. ಬಸ್ ನಿಲ್ದಾಣ ಕಾಮಗಾರಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಯಾವುದೇ ವಿವಾದ ಇಲ್ಲದೆ ನಡೆದಿದೆ. ಆದರೆ, ಬಸ್ ನಿಲ್ದಾಣ ಮೇಲಿನ ಗೋಳಾಕಾರದ ಗುಮ್ಮಟಗಳು ಈಗ ವಿವಾದಕ್ಕೀಡಾಗಿದ್ದು, ಶಾಸಕ ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ ನಡುವೆ ಜಟಾಪಟಿಗೆ ಕಾರಣವಾಗಿದೆ. ಗೋಪುರಗಳು ಇಸ್ಲಾಮಿಕ್ ಶೈಲಿ ಅದನ್ನು ನಾಲ್ಕು ದಿನದಲ್ಲಿ ತೆಗೆಸದಿದ್ದರೇ ನಾನೇ ಒಡೆದು ಹಾಕುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರೆ, ಇಲ್ಲ ಇಲ್ಲ ಅದು ಅರಮನೆ ವಾಸ್ತು ಶೈಲಿಯಲ್ಲಿದೆ. ಮೈಸೂರಿನ ಪರಂಪರೆ ಸಾರಲು ಅರಮನೆ ಗುಮ್ಮಟಗಳ ರೀತಿ ನಿರ್ಮಿಸಲಾಗಿದೆ ಎಂದು ರಾಮದಾಸ್ ಸಮರ್ಥನೆ ನೀಡಿದ್ದಾರೆ. ಇವುಗಳ ಮಧ್ಯೆ ಹೈವೆ ಅಥಾರಿಟಿ ಜಾರಿ ಮಾಡಿರುವ ನೋಟೀಸ್‍ನಲ್ಲಿ ಇದೊಂದು ವಿವಾದಾತ್ಮಕ ಅಕ್ರಮ ಕಟ್ಟಡ, ಯಾವುದೇ ಪೂರ್ವಾನುಮತಿ ಪಡೆಯದೆ ಇದನ್ನು ನಿರ್ಮಿಸಲಾಗಿದೆ. ಜತೆಗೆ ಕಟ್ಟಡ ವಿನ್ಯಾಸವು ಕೋಮು ಭಾವನೆ ಕೆರಳಿಸುವಂತಿದ್ದು ಕೂಡಲೇ ಇದನ್ನು ತೆರವುಗೊಳಿಸಿ ಎಂದು ತಿಳಿಸಲಾಗಿದೆ.
ಇವರಿಬ್ಬರ ಜಟಾಪಟಿ ನೋಡುತ್ತಿರುವ ಮೈಸೂರಿಗರು ಕಟ್ಟಡ ಒಡೆದರೆ 10 ಲಕ್ಷ ರೂ, ಜನರ ತೆರಿಗೆ ಹಣ ಹಾಳುಮಾಡಿದಂತೆ. ಯಾರು ಇದಕ್ಕೆ ಹೊಣೆ. ಶಾಸಕರೋ? ಅಧಿಕಾರಿಗಳೋ ಅಥವಾ ಕಟ್ಟಡ ಒಡೆಯಲು ಮುಂದಾಗಿರುವ ಸಂಸದರೋ ಎಂದು ಪ್ರಶ್ನಿಸಿದ್ದಾರೆ. ಎಲ್ಲಿ ಕಟ್ಟಡ ಒಡೆದು ಹಾಕುತ್ತಾರೋ ಎಂದು ದಿಢೀರನೇ ಕಟ್ಟಡದ ಮುಂಭಾಗ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸುತ್ತೂರು ಶ್ರೀಗಳ ಭಾವಚಿತ್ರವನ್ನು ಹಾಕಲಾಗಿದೆ. ಜತೆಗೆ ಗೋಪುರಗಳ ಮೇಲೆ ಕಳಸವನ್ನೂ ಹಾಕಲಾಗಿದೆ.
0 ಕಾಮೆಂಟ್‌ಗಳು