ಹಾಡ ಹಗಲೇ ಎಗ್ಗಿಲ್ಲದೇ ಸಾಗುತ್ತಿದೆ ಅಕ್ರಮ ಮರಳು ಗಣಿಗಾರಿಕೆ : ಶಿಂಷಾ ನದಿಯ ಒಡಲು ಬಗೆದರೂ ಅಧಿಕಾರಿಗಳ ಜಾಣ ಕುರುಡು : ಸಾರ್ವಜನಿಕರ ಆರೋಪ

-ಟಿ.ಬಿ.ಸಂತೋಷ, ಮದ್ದೂರು

ಮದ್ದೂರು : ತಾಲೂಕಿನ ಕೊಕ್ಕರೆ ಬೆಳ್ಳೂರು ಸಮೀಪದ ಶಿಂಶಾ ನದಿಯಲ್ಲಿ ಹಾಡ ಹಗಲೇ ಅಕ್ರಮವಾಗಿ ಮರುಳು ಗಣಿಗಾರಿಕೆ ನಡೆಯುತ್ತಿದ್ದು, ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತೊರೆಚಾಕನಹಳ್ಳಿ ಹಾಗೂ ಬೆಳ್ಳೂರು ಗ್ರಾಮಗಳ ಸಂಪರ್ಕ ಕಲ್ಪಿಸುವ ಸೇತುವೆಯ ಬಳಿ ಬರುವ ಶಿಂಶಾ ನದಿಯ ದಡದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸದಂತೆ ಸರ್ಕಾರ 144 ಸೆಕ್ಷನ್ ಜಾರಿ ಮಾಡಿದ್ದರೂ ಸುಮಾರು 30ಕ್ಕೂ ಹೆಚ್ಚಿನ ಕೊಪ್ಪರಿಕೆಗಳ ಮೂಲಕ ಹೆಚ್ಚೆಚ್ಚು  ಮರಳನ್ನು ಅಕ್ರಮವಾಗಿ ಬಗೆದು ಎತ್ತಿನಗಾಡಿಗಳ ಮೂಲಕ ಸಾಗಿಸಿ ಮರಳು ದಂಧೆ ನಡೆಸಲಾಗುತ್ತಿದೆ.
ಜೀವ ನದಿ ಶಿಂಶಾ ಒಡಲನ್ನು ಬಗೆದು ಅಕ್ರಮವಾಗಿ ಮರಳನ್ನು ಎತ್ತಿನಗಾಡಿಗಳ ಮೂಲಕ ಹಾಡು ಹಾಗಲೇ ರಾಜಾರೋಷವಾಗಿ ಸಾಗಿಸಿಸುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. 
ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಶಿಂಶಾ ನದಿಯ ಒಡಲು   ಬರಿದ್ದಾಗಿದ್ದು ಇದರಿಂದ ಜಲಚರಗಳಿಗೆ ಗಂಡಾಂತರ ಎದುರಾಗಿದೆ. ಈ ಕೂಡಲೇ ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.